ರಾಯಲ್ ಎನ್‌ಫೀಲ್ಡ್ ಅತ್ಯಂತ ಜನಪ್ರಿಯ ಬೈಕ್ ಕಂಪನಿಗಳಲ್ಲೊಂದು. ದೇಶ-ವಿದೇಶಗಳಲ್ಲಿ ನಿರಂತರವಾಗಿ ಹೊಸ ಮಾದರಿಯ ಮೋಟಾರ್ ಸೈಕಲ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಕೆಲವು ತಿಂಗಳುಗಳ ಹಿಂದಷ್ಟೆ ಭಾರತದಲ್ಲಿ ರಾಯಲ್ ಎನ್‌ಫೀಲ್ಡ್‌ನ ಹಂಟರ್ 350 ಬೈಕ್ ಲಾಂಚ್ ಆಗಿತ್ತು. ಕಂಪನಿ ಸಾಗರೋತ್ತರ ಮಾರುಕಟ್ಟೆಯಲ್ಲಿ ಈಗಾಗ್ಲೇ Meteor 650 ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ 2023ರಲ್ಲಿ ಭಾರತಕ್ಕೂ ಬರಲಿದೆ.
ಇದಾದ್ಮೇಲೆ ಬುಲೆಟ್ 350 ಅನ್ನು ಹೊಸ ಎಂಜಿನ್ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಇಷ್ಟಾದ್ರೂ ಗ್ರಾಹಕರು ಮಾತ್ರ ರಾಯಲ್ ಎನ್‌ಫೀಲ್ಡ್‌ನ ಎಲೆಕ್ಟ್ರಿಕ್ ಬೈಕ್‌ಗಾಗಿ ಕಾಯುತ್ತಿದ್ದಾರೆ. ಆ ದಿನಗಳು ಕೂಡ ದೂರವೇನಿಲ್ಲ. ಯಾಕಂದ್ರೆ ಖುದ್ದು ರಾಯಲ್ ಎನ್‌ಫೀಲ್ಡ್ ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ. ಹಂಟರ್ 350 ಬಿಡುಗಡೆಯ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ್ ಲಾಲ್ ಈ ಬಗ್ಗೆ ಮಾತನಾಡಿದ್ರು. ಕಂಪನಿಯು ಎಲೆಕ್ಟ್ರಿಕ್ ಎನ್‌ಫೀಲ್ಡ್ ಅನ್ನು ಪ್ರಾರಂಭಿಸಲು ಯೋಜಿಸುತ್ತಿಲ್ಲ, ಬದಲಿಗೆ ಆರ್ & ಡಿಗಾಗಿ ಸಮಯವನ್ನು ತೆಗೆದುಕೊಳ್ಳುತ್ತಿದೆ ಎಂದಿದ್ದರು.
ರಾಯಲ್ ಎನ್‌ಫೀಲ್ಡ್ ಸಿಇಒ ಬಿ. ಗೋವಿಂದರಾಜನ್ ಕೂಡ ಇದನ್ನು ಪುನರುಚ್ಛರಿಸಿದ್ದಾರೆ. ಬ್ರಿಟನ್ ಮತ್ತು ಭಾರತದಲ್ಲಿನ ಕಂಪನಿಯ ತಾಂತ್ರಿಕ ಕೇಂದ್ರಗಳಲ್ಲಿ ಆರ್ & ಡಿ ಕೆಲಸ ನಡೆಯುತ್ತಿದೆ. ಎಲೆಕ್ಟ್ರಿಕ್ ರಾಯಲ್ ಎನ್‌ಫೀಲ್ಡ್ ಆಗಮನಕ್ಕೆ ಸುಮಾರು ಮೂರು ವರ್ಷಗಳು ಬೇಕು ಎಂದಿದ್ದಾರೆ. ಹಾಗಾಗಿ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ ನಿರೀಕ್ಷೆಯಲ್ಲಿರುವವರು ಇನ್ನೊಂದಷ್ಟು ದಿನ ಕಾಯಲೇಬೇಕಾಗಿದೆ. ಈ ಮಧ್ಯೆ ರಾಯಲ್ ಎನ್‌ಫೀಲ್ಡ್ ಹಂಟರ್ ಆಗಮನದಿಂದ ಕ್ಲಾಸಿಕ್ 350 ಮಾರಾಟದಲ್ಲಿ ಯಾವುದೇ ಮಹತ್ವದ ಬದಲಾವಣೆಯಾಗಿಲ್ಲ ಎಂದು ಸಿಇಓ ಗೋವಿಂದರಾಜನ್ ಹೇಳಿದ್ದಾರೆ. ಏಕೆಂದರೆ ಹಂಟರ್ ಹಾಗೂ ಕ್ಲಾಸಿಕ್ 350 ವಿಭಿನ್ನ ವರ್ಗದ ಬೈಕ್ಗಳು ಎಂದಿದ್ದಾರೆ. ಕಂಪನಿ ಯುರೋಪ್‌ನಲ್ಲಿ ಮೂರನೇ ಅತ್ಯುತ್ತಮ ಮಾರಾಟದ ಬ್ರ್ಯಾಂಡ್ ಎನಿಸಿಕೊಂಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಾರ್ಷಿಕ ಬೆಳವಣಿಗೆ ಶೇ.14ರಷ್ಟು ಹೆಚ್ಚಿದೆ.