ದಿವಂಗತ ರಮಾನಂದ್ ಸಾಗರ್ ಅವರ ಪೌರಾಣಿಕ ಧಾರಾವಾಹಿ ರಾಮಾಯಣ ಮುಗಿದು 34 ವರ್ಷಗಳೇ ಕಳೆದಿವೆ. ಆದರೆ ಆ ಧಾರಾವಾಹಿಯನ್ನು ಜನರು ಮಾತ್ರ ಇನ್ನೂ ಮರೆತಿಲ್ಲ. ಅದರ ಪ್ರಮುಖ ಪಾತ್ರಗಳ ಮೇಲಿನ ಪ್ರೀತಿ ಮತ್ತು ಮೆಚ್ಚುಗೆಯು ಇಂದಿಗೂ ಜೀವಂತವಾಗಿದೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಮತ್ತೆ ರಾಮಾಯಣವನ್ನು ಮರುಪ್ರಸಾರ ಮಾಡಿದ್ದರಿಂದ ಜನರು ಅವರನ್ನೆಲ್ಲ ಮತ್ತೆ ನೆನಪಿಸಿಕೊಳ್ಳುವಂತಾಯ್ತು.
ರಾಮಾಯಣದಲ್ಲಿ ಭಗವಾನ್ ರಾಮನ ಪಾತ್ರ ಮಾಡಿದ್ದ ನಟ ಅರುಣ್ ಗೋವಿಲ್ ಅವರಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಶಿಷ್ಟ ಅನುಭವವಾಗಿದೆ. ಅರುಣ್ ಅವರನ್ನು ನೋಡಿದ ಮಹಿಳೆಯೊಬ್ಬಳು ಅವರ ಪಾದಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ರಾಮಾಯಣ ಧಾರಾವಾಹಿ ಮುಗಿದು 35 ವರ್ಷಗಳು ಕಳೆದಿವೆ, ಆದರೆ ಅರುಣ್ ಗೋವಿಲ್ ಅವರನ್ನು ಈಗಲೂ ಭಗವಾನ್ ಶ್ರೀರಾಮನಂತೆ ಅಭಿಮಾನಿಗಳು ಆರಾಧಿಸ್ತಿದ್ದಾರೆ. ಇದೊಂದು ಭಾವನಾತ್ಮಕ ಕ್ಷಣ ಎಂದು ಟ್ವಿಟ್ಟರ್ ಬಳಕೆದಾರರು ಬರೆದುಕೊಂಡಿದ್ದಾರೆ.
ರಾಮಾಯಣ ಪ್ರಾಚೀನ ಭಾರತೀಯ ಹಿಂದೂ ಮಹಾಕಾವ್ಯದ ದೂರದರ್ಶನ ರೂಪಾಂತರವಾಗಿತ್ತು. ಕರೋನ ವೈರಸ್ ಸಾಂಕ್ರಾಮಿಕದ ವೇಳೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಧ್ಯೆ, ಸಾರ್ವಜನಿಕ ಬೇಡಿಕೆಯ ಮೇರೆಗೆ ದೂರದರ್ಶನದಲ್ಲಿ ನಿತ್ಯಹರಿದ್ವರ್ಣ ಸರಣಿಯನ್ನು ಮರು-ಪ್ರಸಾರ ಮಾಡಲಾಯಿತು. ರಾಮಾಯಣವನ್ನು ಯುವ ಪೀಳಿಗೆ ಏಕೆ ವೀಕ್ಷಿಸಬೇಕು ಎಂಬುದನ್ನೂ ಅರುಣ್ ವಿವರಿಸಿದ್ದರು.
ರಾಮಾಯಣದ ನೈತಿಕತೆ, ಬೋಧನೆಗಳು ಮತ್ತು ಮೌಲ್ಯಗಳನ್ನು ಯುವಜನತೆ ಅರ್ಥಮಾಡಿಕೊಳ್ಳುತ್ತಾರೆ. ಕುಟುಂಬದವರೊಂದಿಗೆ ಇದನ್ನು ವೀಕ್ಷಿಸುತ್ತಾರೆ, ಸಂವಾದ ಸಹ ನಡೆಸಬಹುದು. ಏನಾದರೂ ಸವಾಲುಗಳಿದ್ದರೆ ಕುಟುಂಬದ ಹಳೆಯ ತಲೆಮಾರಿನ ಸದಸ್ಯರು ವಿಷಯಗಳನ್ನು ವಿವರಿಸಬಹುದು. ಇದು ಕೌಟುಂಬಿಕ ಕಾರ್ಯಕ್ರಮ. ಸಂಬಂಧಗಳು ಹೇಗಿರಬೇಕು ಎಂಬುದನ್ನು ಕಾರ್ಯಕ್ರಮದಲ್ಲಿ ತೋರಿಸಲಾಗಿದೆ ಅಂತಾ ಅರುಣ್ ಗೋವಿಲ್ ಅಭಿಪ್ರಾಯಪಟ್ಟಿದ್ದಾರೆ.
ಈ ಕಾರ್ಯಕ್ರಮವು ಭಾರತೀಯ ದೂರದರ್ಶನಕ್ಕೆ ಗೇಮ್ ಚೇಂಜರ್ ಎನಿಸಿಕೊಂಡಿತ್ತು. ಇಡೀ ರಾಷ್ಟ್ರವನ್ನು ಸೆಳೆದ ರಾಮಾಯಣದಲ್ಲಿ ಸೀತೆಯ ಪಾತ್ರವನ್ನು ದೀಪಿಕಾ ಚಿಖ್ಲಿಯಾ, ಲಕ್ಷ್ಮಣನನ್ನು ಸುನಿಲ್ ಲಾಹಿರಿ, ಹನುಮಾನ್ ಪಾತ್ರವನ್ನು ದಿವಂಗತ ದಾರಾ ಸಿಂಗ್ ಮತ್ತು ರಾವಣನನ್ನು ಅರವಿಂದ್ ತ್ರಿವೇದಿ ನಿರ್ವಹಿಸಿದ್ದಾರೆ.