ಛತ್ತೀಸ್ಗಢದ ಕೊರಿಯಾ ಜಿಲ್ಲೆಯಲ್ಲಿ ಜಲಪಾತದಲ್ಲಿ ಮುಳುಗಿ ಒಂದೇ ಕುಟುಂಬದ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಮಧ್ಯಪ್ರದೇಶ ಮೂಲದವರು. ಒಂದೇ ಕುಟುಂಬದ ಸುಮಾರು 15 ಸದಸ್ಯರು ಒಟ್ಟಾಗಿ ಪ್ರವಾಸ ಬಂದಿದ್ದರು.
ರಾಜಧಾನಿ ರಾಯ್ಪುರದಿಂದ 300 ಕಿಮೀ ದೂರದಲ್ಲಿರುವ ಕೊಟಾಡೋಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮದಾಹಾ ಜಲಪಾತಕ್ಕೆ ಪಿಕ್ನಿಕ್ಗೆ ಆಗಮಿಸಿದ್ದರು. ಜಲಪಾತ ಧುಮ್ಮಿಕ್ಕುವ ಸ್ಥಳದಲ್ಲಿದ ಕೊಳದಲ್ಲಿ ಸ್ನಾನ ಮಾಡ್ತಾ ಇದ್ದ ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಗೆ ತಲುಪಿದೆ.
ಏಳು ಜನರಲ್ಲಿ ಇಬ್ಬರನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ರವಾನಿಸಲಾಯ್ತು. ಅವರಲ್ಲಿ ಓರ್ವ ಮೃತಪಟ್ಟಿದ್ದು, ಮತ್ತೊಬ್ಬರು ಅಪಾಯದಿಂದ ಪಾರಾಗಿದ್ದಾರೆ. ಭಾನುವಾರ ಮತ್ತೆರಡು ಮೃತದೇಹಗಳು ಪತ್ತೆಯಾಗಿವೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ, ಗೃಹರಕ್ಷಕ ದಳ, ಪೊಲೀಸರು ಮತ್ತು ಸ್ಥಳೀಯ ಮುಳುಗುಗಾರರನ್ನು ಒಳಗೊಂಡ ತಂಡ ರಾತ್ರಿವರೆಗೂ ಶೋಧ ಕಾರ್ಯಾಚರಣೆಯನ್ನು ನಡೆಸಿದೆ.
ಬೆಳಗ್ಗೆ ಕಾರ್ಯಾಚರಣೆ ಪುನರಾರಂಭಗೊಂಡಿದ್ದು, ಕಾಣೆಯಾದ ಉಳಿದ ಮೂವರು ಪ್ರವಾಸಿಗರ ಶವಗಳನ್ನು ಪತ್ತೆ ಮಾಡಲಾಗಿದೆ. ಮೃತರನ್ನು ಶ್ವೇತಾ ಸಿಂಗ್ (22), ಶ್ರದ್ಧಾ ಸಿಂಗ್ (14) ಮತ್ತು ಅಭಯ್ ಸಿಂಗ್ (22) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಜಲಪಾತದಲ್ಲಿ ಜನರು ಸ್ನಾನ ಮಾಡದಂತೆ ಸ್ಥಳದಲ್ಲಿ ಎಚ್ಚರಿಕೆ ಫಲಕವನ್ನು ಹಾಕಿದ್ದರೂ, ಪ್ರವಾಸಿಗರು ಆಳವಾದ ನೀರಿನಲ್ಲಿ ತೆರಳಿದ್ದರಿಂದ ಈ ದುರಂತ ಸಂಭವಿಸಿದೆ.