ಅದೃಷ್ಟ ಯಾವಾಗ ಯಾರ ಪಾಲಿಗೆ ಇರುತ್ತೆ ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಕೆಲವೊಮ್ಮೆ ದುರಾದೃಷ್ಟದಿಂದ ಶ್ರೀಮಂತರು ಬೀದಿಗೆ ಬಿದ್ದಂತಹ ಹಲವು ಉದಾಹರಣೆಗಳು ನಮ್ಮ ಮುಂದೆ ಇವೆ. ಹಾಗೆಯೇ ಬಡತನದಲ್ಲೇ ಬೆಳೆದವರು ರಾತ್ರೋರಾತ್ರಿ ಸಿರಿವಂತರಾಗಿರುವವರು ಕೂಡ ಇದ್ದಾರೆ. ಇದೀಗ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಮಿಲಿಯನೇರ್ ಆಗಿದ್ದು, ಕನಸೋ….. ನನಸೋ…… ಅಂತಾ ಆತನೇ ಅಚ್ಚರಿ ಪಡ್ತಿದ್ದಾನೆ.
ದಕ್ಷಿಣ ಕಾಶ್ಮೀರದ ಬಿಜ್‌ಬೆಹರಾ ಪ್ರದೇಶದ ಯುವಕನೊಬ್ಬ ಆನ್‌ಲೈನ್ ಫ್ಯಾಂಟಸಿ ಕ್ರಿಕೆಟ್ ಪ್ಲಾಟ್‌ಫಾರ್ಮ್ ಡ್ರೀಮ್ 11 ನಲ್ಲಿ 2 ಕೋಟಿ ರೂ.ಗಳನ್ನು ಗೆಲ್ಲುವ ಮೂಲಕ ರಾತ್ರೋರಾತ್ರಿ ಮಿಲಿಯನೇರ್ ಆಗಿದ್ದಾನೆ.
ಅನಂತನಾಗ್ ಜಿಲ್ಲೆಯ ಶಾಲ್ಗಾಮ್ ಗ್ರಾಮದ ನಿವಾಸಿ ವಸೀಮ್ ರಾಜಾ ಎಂಬಾತ ಶನಿವಾರ ತಡರಾತ್ರಿ ನಿದ್ರಿಸುತ್ತಿದ್ದ. ಈ ವೇಳೆ ಕೆಲವು ಸ್ನೇಹಿತರು ಆತನನ್ನು ಎಬ್ಬಿಸಿ, ಡ್ರೀಮ್ 11 ರಲ್ಲಿ ಮೊದಲ ಸ್ಥಾನ ಪಡೆದಿದ್ದಾಗಿ ತಿಳಿಸಿದ್ದಾರೆ. ಇದರಲ್ಲಿ ಅವರು ಸುಮಾರು 2 ಕೋಟಿ ರೂ. ಗಳಿಸಿದ್ದಾನೆ.
ರಾತ್ರೋರಾತ್ರಿ ಲಕ್ಷಾಧಿಪತಿಯಾಗಿರುವುದು ಕನಸಿನಂತಿದ್ದು, ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ನಾವು ಬಡತನದಿಂದ ಹೊರಬರಲು ಈ ಹಣ ಸಹಕಾರಿಯಾಗುತ್ತದೆ ಎಂದು ಹೇಳಿದ್ದಾನೆ. ಅಲ್ಲದೆ, ಆತನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆಕೆಯ ಚಿಕಿತ್ಸಾ ವೆಚ್ಚಕ್ಕೆ ಇದು ಉಪಯೋಗವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳು ವೈರಲ್ ಆಗಿದ್ದು, ಜನರು ವಸೀಂ ರಾಜಾ ಅವರನ್ನು ಅಭಿನಂದಿಸುತ್ತಿರುವುದನ್ನು ಕಾಣಬಹುದು.