ಪಟ್ನಾ: ಸುಮಾರು 2 ಕಿಲೋಮೀಟರ್ ಉದ್ದದ ಸಂಪೂರ್ಣ ರಸ್ತೆ ಕಳ್ಳತನವಾಗಿರುವ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ ? ರಸ್ತೆಯ ಬಲ್ಬ್ಗಳು ಅಥವಾ ಸಸ್ಯಗಳನ್ನು ಕದ್ದೊಯ್ಯುವ ಘಟನೆಗಳು ಸಾಮಾನ್ಯವಾಗಿರಬಹುದು. ಆದರೆ ಇಡೀ ರಸ್ತೆಯನ್ನೇ ಯಾರಾದರೂ ಕದ್ದಿರುವುದನ್ನು ನೀವು ಎಂದಿಗೂ ಕೇಳಿಲ್ಲ. ಈ ಪ್ರಕರಣವು ಬಿಹಾರದ ಬಂಕಾ ಜಿಲ್ಲೆಯ ರಾಜೌನ್ ಬ್ಲಾಕ್ನ ಖರೌನಿ ಗ್ರಾಮಕ್ಕೆ ಸಂಬಂಧಿಸಿದೆ.
ಖಾದಂಪುರವನ್ನು ಜನರು ನಡೆಯಲು ವರ್ಷಗಳಿಂದ ಬಳಸುತ್ತಿದ್ದ ರಸ್ತೆ ಕಳುವಾಗಿದೆ. ಒಂದು ಮುಂಜಾನೆ, ಜನರು ಹಾದು ಹೋಗುತ್ತಿದ್ದಾಗ, ಇಡೀ ರಸ್ತೆಯು ಕಣ್ಮರೆಯಾಗಿ ಬೆಳೆಗಳಿಂದ ಬದಲಿಯಾಗಿದ್ದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ.
ತಾವು ದಾರಿ ತಪ್ಪಿ ಬಂದಿರುವುದಾಗಿ ಜನರು ಆರಂಭದಲ್ಲಿ ಅಂದುಕೊಂಡರು. ಆದರೆ ಕೊನೆಗೆ ತಿಳಿದದ್ದು ನಿಜಕ್ಕೂ ರಸ್ತೆ ಕಳುವಾಗಿದೆ ಎಂದು ! ಗ್ರಾಮದ ಗೂಂಡಾಗಳು ಟ್ರ್ಯಾಕ್ಟರ್ನಿಂದ ರಸ್ತೆಯನ್ನು ಉಳುಮೆ ಮಾಡಿ ಅದರ ಮೇಲೆ ಗೋಧಿ ಬೆಳೆಗಳನ್ನು ಬಿತ್ತಿದ್ದರು. ಇದನ್ನು ಖಾದಂಪುರ ಗ್ರಾಮದ ಜನರು ವಿರೋಧಿಸಿದಾಗ ಗೂಂಡಾಗಳು ಲಾಠಿ, ರಾಡ್ಗಳಿಂದ ಬೆದರಿಸಿದ್ದಾರೆ.
ಘಟನೆಯ ನಂತರ ಗ್ರಾಮದಲ್ಲಿ ಸಂಚಲನ ಉಂಟಾಗಿದೆ. ವರ್ಷಾನುಗಟ್ಟಲೆ ಬಂದು ಹೋಗಲು ಇದೇ ರಸ್ತೆಯನ್ನು ಬಳಸುತ್ತಿರುವುದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಕಳೆದ ಕೆಲ ದಿನಗಳಿಂದ ಖಾದಂಪುರ ಗ್ರಾಮದ ಜನರು ಫುಟ್ಪಾತ್ ಮೂಲಕ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಕುರಿತು ಖಾದಂಪುರ ಗ್ರಾಮದ ಸುಮಾರು 35 ಮಂದಿ ಸರ್ಕಲ್ ಆಫೀಸರ್ ಮಹಮ್ಮದ್ ಮೊಯಿನುದ್ದೀನ್ ಅವರಿಗೆ ಮನವಿ ಸಲ್ಲಿಸಿದ್ದು, ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.