
ನೈಟ್ ಔಟ್ ಹೋಗುವವರನ್ನು ತನಿಖೆ ನಡೆಸುವ ಎಲ್ಲಾ ಅಧಿಕಾರ ಪೊಲೀಸರಿಗೆ ಇದೆ ಎಂದು ಹೇಳುವ ಮೂಲಕ ಬಾಂಬೆ ಹೈಕೋರ್ಟ್ ಕುಡುಕರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ದಾಖಲಿಸಿದ್ದ ಎಫ್ಐಆರ್ನ್ನು ರದ್ದುಗೊಳಿಸಲು ನಿರಾಕರಿಸಿದೆ.
ವಿಲೇ ಪಾರ್ಲೆಯಲ್ಲಿ ಕುಡಿದು ವಾಹನ ಚಲಾಯಿಸುವವರನ್ನು ಪತ್ತೆ ಮಾಡಲು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಸಬ್ ಇನ್ಸ್ಪೆಕ್ಟರ್ 2019ರ ಫೆಬ್ರವರಿ 2ರಂದು ಕುಡಿದು ವಾಹನ ಚಲಾಯಿಸಿದ್ದವರ ವಿರುದ್ಧ ಎಫ್ಐಆರ್ ದಾಖಲಿಸುತ್ತಿದ್ದರು.
ಬೆಳಗ್ಗಿನ ಜಾವ 1:50ರ ಸುಮಾರಿಗೆ ಕುಡಿತದ ಅಮಲಿನಲ್ಲಿದ್ದ ಚಾಲಕನೊಬ್ಬ ಕಾರನ್ನು ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಅಂಧೇರಿ ಸೇತುವೆ ಬಳಿ ನಿಲ್ಲಿಸಿದ್ದ. ಇಬ್ಬರು ಮಹಿಳೆಯರು ಸೇರಿದಂತೆ ಏಳು ಮಂದಿಯಿದ್ದ 2 ಕಾರುಗಳನ್ನು ಪೊಲೀಸರು ಗಮನಿಸಿದ್ದರು.
ಒಂದು ಕಾರಿನ ಚಾಲಕ ಕುಡಿತದ ಪರೀಕ್ಷೆಗೆ ಹಾಜರಾಗಲು ನಿರಾಕರಿಸಿ ಪೊಲೀಸರಿಗೆ ಲಂಚ ನೀಡಲು ಯತ್ನಿಸಿದ್ದ. ಆದರೆ ಪರೀಕ್ಷೆಯಲ್ಲಿ ಈತ ಕುಡಿದಿದ್ದು ದೃಢಪಟ್ಟಿದ್ದು ಮಾತ್ರವಲ್ಲದೇ ಆತನ ಬಳಿ ಲೈಸೆನ್ಸ್ ಕೂಡ ಇರಲಿಲ್ಲ ಎನ್ನುವುದು ಪೊಲೀಸರು ಗಮನಕ್ಕೆ ಬಂದಿತ್ತು.
ಈ ಗುಂಪು ತನ್ನ ಫೋನುಗಳಿಂದ ವಿಡಿಯೋಗಳನ್ನು ಚಿತ್ರೀಕರಿಸಲು ಯತ್ನಿಸಿತು ಹಾಗೂ ದಂಡದ ರಶೀದಿ ಮೇಲೆ ಸಹಿ ಹಾಕಲೂ ಸಹ ನಿರಾಕರಿಸಿತ್ತು. ಈ ನಡುವೆ ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದ ಈ ಏಳು ಮಂದಿ ಪೊಲೀಸರನ್ನು ನಿಂದಿಸಿದ್ದಾರೆ. ಈ ಏಳು ಮಂದಿಯ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಅರ್ಜಿದಾರರ ಪರ ಕೋರ್ಟ್ಗೆ ಹಾಜರಾದ ವಕೀಲೆ ರೋಹಿಣಿ ವಾಘ್ ಪೊಲೀಸರು ವಿಧಿಸಿರುವ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಕಕ್ಷಿದಾರರು ಯಾವುದೇ ಅಪರಾಧವನ್ನು ಎಸಗಿಲ್ಲ. ಅಲ್ಲದೇ ಅರ್ಜಿದಾರರು ಮದ್ಯ ಸೇವನೆ ಮಾಡಿಲ್ಲ. ಹಾಗೂ ಇವರ್ಯಾರೂ ಕ್ರಿಮಿನಲ್ ಹಿನ್ನೆಲೆ ಉಳ್ಳವರಲ್ಲ ಎಂದು ವಾದಿಸಿದ್ದರು.
ಪೊಲೀಸರು ದಾಖಲಿಸಿರುವ ಎಫ್ಐಆರ್ ಹಾಗೂ ಸಾಕ್ಷ್ಯಗಳ ಹೇಳಿಕೆಗಳನ್ನು ಆಧರಿಸಿ ಬಾಂಬೆ ಹೈಕೋರ್ಟ್ ಈ ಪ್ರಕರಣದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿರುವುದು ನಾವು ಗಮನಿಸಬೇಕಾದ ಅಂಶವಾಗಿದೆ. ಅಲ್ಲದೇ ಮದ್ಯಪಾನ ಮಾಡಿ ಚಾಲನೆ ಮಾಡುವವರನ್ನು ಪ್ರಶ್ನಿಸುವ ಅಧಿಕಾರ ಪೊಲೀಸರಿಗೆ ಇದೆ ಎಂದು ಹೇಳಿದೆ.