ಚಪಾತಿಯನ್ನು ಭಾರತದಲ್ಲಿ ಬಹುತೇಕ ಜನರು ಸೇವಿಸ್ತಾರೆ. ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಚಪಾತಿ ಕಡ್ಡಾಯ. ಇನ್ನು ಬೆಳಗಿನ ತಿಂಡಿಗೆ ಬ್ರೆಡ್ ಮತ್ತು ಹಣ್ಣು ತರಕಾರಿಗಳನ್ನು ತಿನ್ನುವವರಿದ್ದಾರೆ. ರಾತ್ರಿ ಮಾಡಿದ ಚಪಾತಿ ಉಳಿದು ಹೋಗಿದ್ದರೆ ಅದರಿಂದಲೇ ಬೆಳಗ್ಗೆ ರುಚಿಕರವಾದ ತಿಂಡಿಯನ್ನು ತಯಾರಿಸಬಹುದು. ಚಪಾತಿ ಹೆಚ್ಚಾದರೆ ಅದನ್ನು ಎಸೆಯಬೇಕಾದ ಅಗತ್ಯವಿಲ್ಲ. ಉಳಿದ ಚಪಾತಿಯಿಂದ ಟೇಸ್ಟಿ ಸ್ಯಾಂಡ್‌ವಿಚ್ ತಯಾರಿಸುವುದು ಹೇಗೆ ಅನ್ನೋದನ್ನು ನೋಡೋಣ.
ಬೇಕಾಗುವ ಸಾಮಗ್ರಿಗಳು-ಚಪಾತಿ 2-3, ಎಣ್ಣೆ 2 ಟೀಸ್ಪೂನ್ ಸಣ್ಣದಾಗಿ ಹೆಚ್ಚಿದ ಈರುಳ್ಳಿ ½, ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ 1/2 ಟೀಸ್ಪೂನ್, ಸಣ್ಣದಾಗಿ ಹೆಚ್ಚಿದ ಶುಂಠಿ 1/2 ಟೀಸ್ಪೂನ್, ಸಣ್ಣದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ 1, ತುರಿದ ಕ್ಯಾರೆಟ್ಸ್ವಲ್ಪ, ಎಲೆಕೋಸು 3 ಚಮಚ, ಸಣ್ಣದಾಗಿ ಹೆಚ್ಚಿದ ಕ್ಯಾಪ್ಸಿಕಂ ½,ಸ್ವೀಟ್ ಕಾರ್ನ್ 3-4 ಟೀಸ್ಪೂನ್, ರುಚಿಗೆ ಉಪ್ಪು, ಕಾಶ್ಮೀರಿ ಕೆಂಪು ಮೆಣಸಿನ ಪುಡಿ 1/2 ಟೀಸ್ಪೂನ್, ಟೊಮೆಟೊ ಸಾಸ್ 2 ಟೀಸ್ಪೂನ್, ಚಿಲ್ಲಿ ಸಾಸ್ 1 ಟೀಸ್ಪೂನ್, ಚಿಟಿಕೆ ಕಾಳುಮೆಣಸಿನ ಪುಡಿ, ಗ್ರೀನ್ ಚಟ್ನಿ 2 tbsp, 2 ಚೀಸ್ ಸ್ಲೈಸ್, ಗಾರ್ನಿಶ್ ಮಾಡಲು ಈರುಳ್ಳಿ ಚೂರುಗಳು, ಸೌತೆಕಾಯಿ ಚೂರುಗಳು, ಚೀಸ್, ಬೆಣ್ಣೆ 1 ಟೀಸ್ಪೂನ್.
ಚಪಾತಿ ಸ್ವಾಂಡ್ವಿಚ್ ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನಂತರ ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಕತ್ತರಿಸಿದ ಎಲ್ಲಾ ತರಕಾರಿಗಳನ್ನು ಸೇರಿಸಿ. ಸ್ವಲ್ಪ ಹುರಿದ ಬಳಿಕ ಟೊಮೆಟೊ ಮತ್ತು ಚಿಲ್ಲಿ ಸಾಸ್ ಸೇರಿಸಿಕೊಳ್ಳಿ. ನಂತರ ಅದಕ್ಕೆ ಉಪ್ಪು, ಕಾಳುಮೆಣಸು ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ.
ಇನ್ನೊಂದು ತವಾದಲ್ಲಿ ಸ್ವಲ್ಪ ಬೆಣ್ಣೆಯನ್ನು ಹಾಕಿ ಕರಗಿಸಿ. ಚಪಾತಿಯನ್ನು ಎರಡೂ ಬದಿಗಳಿಂದ ಬಿಸಿ ಮಾಡಿಕೊಳ್ಳಿ. ನಂತರ ಚಪಾತಿ ಮೇಲೆ ಸಾಸ್ ಹಾಕಿಕೊಳ್ಳಿ. ಬಳಿಕ ಚಪಾತಿಯ ಮೇಲೆ ತರಕಾರಿಯನ್ನು ಹಾಕಿಕೊಳ್ಳಿ. ಗ್ರೀನ್ ಚಟ್ನಿ, ಈರುಳ್ಳಿ ಚೂರುಗಳು, ಸೌತೆಕಾಯಿ ಚೂರುಗಳು ಮತ್ತು ತೆಳುವಾಗಿ ಕತ್ತರಿಸಿದ ಚೀಸ್ ಸ್ಲೈಸ್ ಹಾಕಿ. ಪನೀರ್ ಕೂಡ ಹಾಕಿಕೊಳ್ಳಬಹುದು. ಅದನ್ನು ಮತ್ತೊಂದು ಚಪಾತಿಯಿಂದ ಮುಚ್ಚಿ ಮತ್ತು ಚೀಸ್ ಕರಗುವ ತನಕ ಬಿಸಿ ತವಾ ಮೇಲೆ ಬೇಯಿಸಿ. ಬಿಸಿ ಬಿಸಿ ಸ್ವಾಂಡ್ವಿಚ್ ಅನ್ನು ನೀಟಾಗಿ ಚಾಕುವಿನಿಂದ ಕತ್ತರಿಸಿ ಗ್ರೀನ್ ಚಟ್ನಿ ಅಥವಾ ಸಾಸ್ ಜೊತೆಗೆ ಸವಿಯಿರಿ.