ರಾತ್ರಿ ಮಲಗುವ ಮೊದಲು ಹಲ್ಲುಜ್ಜುವುದು ಉತ್ತಮ ಅಭ್ಯಾಸ. ಆದರೆ ಕೆಲವರು ಮಲಗುವ ಮುನ್ನ ಬ್ರಷ್ ಮಾಡುವುದಿಲ್ಲ. ರಾತ್ರಿ ಹಲ್ಲುಜ್ಜದೇ ಮಲಗುವುದರಿಂದ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನವೊಂದು ಬೆಚ್ಚಿ ಬೀಳಿಸುವ ಸಂಗತಿಯನ್ನು ಬಹಿರಂಗಪಡಿಸಿದೆ. ರಾತ್ರಿಯಲ್ಲಿ ಹಲ್ಲುಜ್ಜದೇ ನಿದ್ರಿಸುವವರಲ್ಲಿ ಹೃದ್ರೋಗದ ಅಪಾಯ ಹೆಚ್ಚು ಅನ್ನೋ ಆಘಾತಕಾರಿ ಸಂಗತಿ ಸಂಶೋಧನೆಯಲ್ಲಿ ದೃಢಪಟ್ಟಿದೆ.
ನೇಚರ್ ಜರ್ನಲ್‌ನ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ರಾತ್ರಿ ಹಲ್ಲುಜ್ಜದೇ ಇರುವುದು ಹೃದ್ರೋಗಕ್ಕೆ ಕಾರಣವಾಗಬಹುದು. ಈ ಅಧ್ಯಯನದಲ್ಲಿ 20 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 1675 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ರಾತ್ರಿ ಬ್ರಷ್ ಮಾಡದವರಲ್ಲಿ ಹೃದಯ ರಕ್ತನಾಳದ ಕಾಯಿಲೆಗಳು ಅಂದರೆ ಹೃದ್ರೋಗದ ಅಪಾಯವು ತುಂಬಾ ಹೆಚ್ಚಾಗಿರುವುದು ಕಂಡುಬಂದಿದೆ.
ರಾತ್ರಿ ಬ್ರಷ್ ಮಾಡುವುದರಿಂದ ಪರಿದಂತದ ಕಾಯಿಲೆ, ಹಲ್ಲುಗಳಲ್ಲಿ ಹುಳುಕು, ಮೌಖಿಕ ನೈರ್ಮಲ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಮೌಖಿಕ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ ಹೃದ್ರೋಗದ ಜೊತೆಗೆ ಇತರ ಅನೇಕ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ವರದಿಯ ಪ್ರಕಾರ ಈ ಅಧ್ಯಯನದಲ್ಲಿ ತೊಡಗಿರುವ ಜನರು 2013 ಮತ್ತು 2016ರ ನಡುವೆ ಶಸ್ತ್ರಚಿಕಿತ್ಸೆ, ಪರೀಕ್ಷೆಗಳು ಮತ್ತು ಚಿಕಿತ್ಸೆಗಾಗಿ ಜಪಾನ್‌ನಲ್ಲಿರುವ ಒಸಾಕಾ ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಧ್ಯಯನಕ್ಕೆ ಒಳಪಟ್ಟ 409 ಜನರು ದಿನಕ್ಕೆ ಎರಡು ಬಾರಿ ಹಲ್ಲುಜ್ಜುತ್ತಿದ್ದರು. ರಾತ್ರಿ ಮಾತ್ರ ಬ್ರಷ್ ಮಾಡುತ್ತಿದ್ದವರ ಗುಂಪಿನಲ್ಲಿ 751 ಮಂದಿ ಇದ್ದರು. ಮಾರ್ನಿಂಗ್ ಗುಂಪಿನಲ್ಲಿ 164 ಜನರಿದ್ದು ಇವರು ಬೆಳಗ್ಗೆ ಎದ್ದ ನಂತರ ಮಾತ್ರ ಹಲ್ಲುಜ್ಜುತ್ತಿದ್ದರು. ಬೆಳಗ್ಗೆ ಅಥವಾ ರಾತ್ರಿ ಬ್ರಷ್ ಮಾಡದ ಗುಂಪು ಕೂಡ ಇತ್ತು.ಅಮೆರಿಕನ್ ಡೆಂಟಲ್ ಅಸೋಸಿಯೇಷನ್ , ಫ್ಲೋರೈಡ್ ಟೂತ್‌ಪೇಸ್ಟ್ ಹಾಕಿಕೊಂಡು ದಿನಕ್ಕೆ ಎರಡು ಬಾರಿ ಹಲ್ಲುಜ್ಜಲು ಶಿಫಾರಸು ಮಾಡುತ್ತದೆ. ಇದಲ್ಲದೆ ದಿನಕ್ಕೆ ಒಮ್ಮೆಯಾದರೂ ಫ್ಲೋಸ್ಸಿಂಗ್ ಮಾಡಬೇಕು, ಇದು ಬಾಯಿಯಲ್ಲಿ ಸಂಗ್ರಹವಾಗಿರುವ ಬ್ಯಾಕ್ಟೀರಿಯಾ ಮತ್ತು ಪ್ಲೇಕ್ ಅನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.