ಬೆಂಗಳೂರು: ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ನಾಯಕಿ ಪಟ್ಟದಿಂದ ಮೋಹಕ ತಾರೆ ನಟಿ ರಮ್ಯಾ ಹಿಂದೆ ಸರಿದಿದ್ದಾರೆ.
ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ರಮ್ಯಾ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಚಿತ್ರದ ನಾಯಕಿ ಸ್ಥಾನದಿಂದ ಹಿಂದೆ ಸರಿದಿದ್ದು, ಚಿತ್ರದ ನಿರ್ಮಾಪಕಿಯಾಗಿ ಮಾತ್ರ ರಮ್ಯಾ ಮುಂದುವರೆಯಲಿದ್ದಾರೆ ಎಂದು ತಿಳಿದುಬಂದಿದೆ.
ರಮ್ಯಾ ಜಾಗಕ್ಕೆ ಸಿರಿ ರವಿಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ರಮ್ಯಾ ಅವರೇ ಸಿರಿ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.
ಆಪಲ್ ಬಾಕ್ಸ್ ಸ್ಟುಡಿಯೋಸ್ ಮತ್ತು ಲೈಟರ್ ಬುದ್ಧ ಫಿಲ್ಮ್ಸ್ ಸಹಯೋಗದಲ್ಲಿ ಈ ಚಿತ್ರಮೂಡಿ ಬರುತ್ತಿದ್ದು, ಉದಯೋನ್ಮುಖ ಪ್ರತಿಭೆಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಚಿತ್ರತಂಡ ಸೇರುತ್ತಿರುವ ನಟ-ನಟಿಯರು, ತಂತ್ರಜ್ಞರಿಗೆ ಹೃದಯಪೂರ್ವಕ ಸ್ವಾಗತ ಎಂದು ರಮ್ಯಾ ತಿಳಿಸಿದ್ದಾರೆ.