ರಾಜ್ಯ ಸರ್ಕಾರಿ ನೌಕರರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಬಹು ದಿನಗಳಿಂದ ನಿರೀಕ್ಷೆಯಲ್ಲಿದ್ದ ಏಳನೇ ವೇತನ ಆಯೋಗದ ಶಿಫಾರಸ್ಸಿನಡಿ, ಹೊಸ ವೇತನ ಶ್ರೇಣಿ 2023ರ ಜನವರಿಯಿಂದ ಜಾರಿಯಾಗುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಗುರುವಾರದಂದು ಹೊಳಲ್ಕೆರೆ ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡುವ ವೇಳೆ ಈ ವಿಷಯ ತಿಳಿಸಿದ್ದು, ಆಗಸ್ಟ್ ನಲ್ಲಿ ಏಳನೇ ವೇತನ ಆಯೋಗ ರಚಿಸಿ ವಿಧಾನಸಭಾ ಚುನಾವಣೆಯೊಳಗಾಗಿ ಹೊಸ ವೇತನ ಶ್ರೇಣಿ ಜಾರಿಗೊಳಿಸುವ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಅಲ್ಲದೆ ಶೀಘ್ರವೇ ಇ ಸೇವಾ ಪುಸ್ತಕ ವ್ಯವಸ್ಥೆ ಜಾರಿಗೆ ಬರಲಿದ್ದು, ಜೊತೆಗೆ ಸರ್ಕಾರಿ ನೌಕರರ ಮೊಬೈಲ್ ಗೆ ವೇತನ ಮಾಹಿತಿ ಸಂದೇಶ ಬರಲಿದೆ. ಹಾಗೂ ಒಂದು ಕೋಟಿ ರೂಪಾಯಿವರೆಗಿನ ಉಚಿತ ಚಿಕಿತ್ಸೆ ಸೌಲಭ್ಯದ ಯೋಜನೆಗೂ ಸದ್ಯದಲ್ಲೇ ಚಾಲನೆ ಸಿಗಲಿದೆ ಎಂದು ಷಡಾಕ್ಷರಿ ತಿಳಿಸಿದರು.