ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಶನಿವಾರದಂದು ಮೈಸೂರಿನಲ್ಲಿ ಪಕ್ಷದ ಪ್ರಮುಖರ ಜೊತೆ ನಡೆಸಿದ ಸಭೆಯಲ್ಲಿ ಆಡಿರುವ ಮಾತೊಂದು ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ‘ಪದೇ ಪದೇ ನಾಯಕತ್ವ ಬದಲಾವಣೆಯೇ ಬಿಜೆಪಿಯ ಶಕ್ತಿ’ ಎಂಬ ಮಾತುಗಳನ್ನು ಅವರು ಹೇಳಿದ್ದು, ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಅಲ್ಲದೆ, ಕುಟುಂಬ ರಾಜಕಾರಣ ಕುರಿತಾಗಿಯೂ ಬಿ.ಎಲ್. ಸಂತೋಷ್ ಮಾತನಾಡಿದ್ದು, ಹೀಗಾಗಿ ರಾಜಕೀಯದಲ್ಲಿ ತಮ್ಮ ಮಕ್ಕಳನ್ನು ಬೆಳೆಸಬೇಕೆಂಬ ಕನಸು ಹೊಂದಿದ್ದ ಬಿಜೆಪಿಯ ಹಲವು ಹಿರಿಯ ನಾಯಕರಿಗೆ ಈಗ ಒಳಗೊಳಗೆ ಆತಂಕ ಶುರುವಾಗಿದೆ. ಜೊತೆಗೆ ಹಾಲಿ ಶಾಸಕರ ಪೈಕಿ ಬಹುತೇಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ದೊರೆಯುವುದು ಅನುಮಾನವೆಂದು ಹೇಳಲಾಗಿದೆ.
ಅದರಲ್ಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಭೇಟಿಗೂ ಮುನ್ನ ಬಿ.ಎಲ್. ಸಂತೋಷ್ ಅವರು ಈ ಮಾತುಗಳನ್ನಾಡಿರುವುದರಿಂದ ರಾಜ್ಯದಲ್ಲಿನ ನಾಯಕತ್ವ ಬದಲಾವಣೆಯಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ. ಸಂಪುಟ ಪುನರ್ರಚನೆ ಅಥವಾ ವಿಸ್ತರಣೆ ಆಗಬಹುದೆಂಬ ಮಾತುಗಳ ಮಧ್ಯೆ ಬಿ.ಎಲ್. ಸಂತೋಷ್ ಅವರ ಈ ಹೇಳಿಕೆ ಬಿಜೆಪಿ ಮಾತ್ರವಲ್ಲ ಉಳಿದ ಪಕ್ಷಗಳ ನಾಯಕರಲ್ಲೂ ಕುತೂಹಲ ಹುಟ್ಟಿಸಿದೆ. ಅಮಿತ್ ಶಾ ರಾಜ್ಯ ಭೇಟಿ ಬಳಿಕ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಲಾಗುತ್ತಿದೆ.