ರಾಜ್ಯದ ಪ್ರಮುಖ ಸಮುದಾಯಗಳ ಪೈಕಿ ಒಕ್ಕಲಿಗ ಸಮಾಜ ಕೂಡ ಒಂದು. ಹೀಗಾಗಿ ಈ ಸಂಘದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ನಾ ಮುಂದು ತಾ ಮುಂದು ಎಂದು ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದರು. ಆದರೆ ಸಂಘದ ಚುನಾವಣೆ ಎರಡು ವರ್ಷಗಳಿಂದ ಕೋರ್ಟ್ ನಲ್ಲಿದ್ದ ಕಾರಣ ಸರ್ಕಾರಿ ಅಧಿಕಾರಿಗಳೇ ಸಂಘ ಸಂಸ್ಥೆಯನ್ನ ಮುನ್ನಡೆಸುತ್ತಿದ್ರು. ಆದ್ರೆ ಇಂದು ಇದಕ್ಕೆಲ್ಲ ತೆರೆ ಬಿದ್ದಿದ್ದು, ರಾಜ್ಯ ಒಕ್ಕಲಿಗ ಸಂಘಕ್ಕೆ ಅಧ್ಯಕ್ಷರ ಆಯ್ಕೆಯಾಗಿದೆ.
ಹೌದು, ಡಿಸೆಂಬರ್ 12ರಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ನಡೆದಿತ್ತು. ಡಿಸೆಂಬರ್ 15 ರಂದು ಬಂದ ಫಲಿತಾಂಶದಲ್ಲಿ 35 ಅಭ್ಯರ್ಥಿಗಳು ಗೆದ್ದಿದ್ದರು. ಆನಂತರ ಶುರುವಾಗಿದ್ದು ಅಧ್ಯಕ್ಷ ಗಾದಿಯ ಟಫ್ ಫೈಟ್. ಅಧ್ಯಕ್ಷ ಸ್ಥಾನಕ್ಕೆ ಬಿ.ಕೆಂಚಪ್ಪಗೌಡ ಹಾಗೂ ಶಾಸಕ ಸಿ.ಎನ್.ಬಾಲಕೃಷ್ಣ ಸ್ಪರ್ದಿಸಿದ್ದರು. ಇಂದು ಸಂಘದ ಮುಖ್ಯ ಭವನದಲ್ಲೆ ಚುನಾವಣಾಧಿಕಾರಿ ನೇತೃತ್ವದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ವಿವಿಧ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಆದರೆ ಎಲ್ಲರ ಗಮನವಿದ್ದದ್ದು ಅಧ್ಯಕ್ಷ ಯಾರಾಗುತ್ತಾರೆ ಎಂದು. ಸಧ್ಯ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ.
35 ನಿರ್ದೇಶಕರ ಪೈಕಿ 20 ನಿರ್ದೇಶಕರ ಮತಗಳಿಸಿರುವ ಶಾಸಕ ಸಿ.ಎನ್.ಬಾಲಕೃಷ್ಣ ಜಯಭೇರಿ ಬಾರಿಸಿದ್ದಾರೆ. ಗೆದ್ದ ನಂತರ ಮಾತನಾಡಿರುವ ಬಾಲಕೃಷ್ಣರವರು, ಇದು ಕೇವಲ ನನ್ನ ಗೆಲುವಲ್ಲ, ಇದು ಇಡೀ ಸಮುದಾಯದ ಗೆಲುವು. ಇನ್ನುಮುಂದೆ ಸಂಘದ ಏಳಿಗೆಗಾಗಿ ದುಡಿಯುತ್ತೇನೆ. ನಾವೆಲ್ಲಾ ಸಂಘದಲ್ಲಿ ಹೊಸ ಬದಲಾವಣೆ ತರುತ್ತೇವೆ ಎಂದಿದ್ದಾರೆ.