ರಾಜ್ಯಸಭೆಯ ಒಟ್ಟು ನಾಲ್ಕು ಸ್ಥಾನಗಳಿಗೆ ಇಂದು ಮತದಾನ ನಡೆಯಲಿದ್ದು, ಒಟ್ಟು ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಲೆಹರ್ ಸಿಂಗ್ ಕಣದಲ್ಲಿದ್ದರೆ, ಕಾಂಗ್ರೆಸ್ ನಿಂದ ಜೈರಾಮ್ ರಮೇಶ್ ಹಾಗೂ ಮನ್ಸೂರ್ ಅಲಿಖಾನ್ ಕಣಕ್ಕಿಳಿದಿದ್ದಾರೆ. ಇನ್ನು ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಅಭ್ಯರ್ಥಿಯಾಗಿದ್ದು ವಿಜಯಮಾಲೆ ಯಾರಿಗೆ ಒಲಿಯಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಎರಡು ಸ್ಥಾನ ಹಾಗೂ ಕಾಂಗ್ರೆಸ್ 1 ಸ್ಥಾನ ಪಡೆದುಕೊಳ್ಳುವುದು ಖಚಿತವಾಗಿದ್ದು, ಆದರೆ 4 ನೇ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಅಡ್ಡ ಮತದಾನದ ಭೀತಿ ಮೂರೂ ಪಕ್ಷಗಳಿಗೆ ಕಾಡತೊಡಗಿದ್ದು, ತಂತಮ್ಮ ಶಾಸಕರುಗಳನ್ನು ಹಿಡಿದಿಟ್ಟುಕೊಳ್ಳಲು ನಾಯಕರು ತಂತ್ರಗಾರಿಕೆ ಹೆಣೆದಿದ್ದಾರೆ.
ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ ಇಂದೇ ಫಲಿತಾಂಶ ಹೊರಬೀಳಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುತ್ತವೆ ಎಂದು ಹೇಳಲಾಗಿತ್ತಾದರೂ ಅದು ಫಲಪ್ರದವಾಗಿಲ್ಲ. ಇದರ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಕೋರಿ ಜೆಡಿಎಸ್ ಶಾಸಕರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿರುವುದು ದಳ ನಾಯಕರನ್ನು ಕೆರಳಿಸಿದೆ. ಇಂದಿನ ರಾಜ್ಯ ಸಭಾ ಚುನಾವಣಾ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನುಡಿ ಬರೆಯಲಿದೆ ಎಂದು ಹೇಳಲಾಗುತ್ತಿದ್ದು, ಪಕ್ಷ ತೊರೆಯುವ ಹಾದಿಯಲ್ಲಿರುವವರು ಅಡ್ಡ ಮತದಾನ ಮಾಡಬಹುದು ಎನ್ನಲಾಗಿದೆ.