ರಾಜ್ಯಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಕುರಿತಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ನಡೆದ ಗುದ್ದಾಟ ಬಿಜೆಪಿಯ ಮೂರನೇ ಅಭ್ಯರ್ಥಿಗೆ ವರದಾನವಾಗಿ ಪರಿಣಮಿಸಿದೆ. ಬಿಜೆಪಿಯ ನಿರ್ಮಲ ಸೀತಾರಾಮನ್, ಜಗ್ಗೇಶ್ ಜೊತೆಗೆ ಲೆಹರ್ ಸಿಂಗ್ ಕೂಡ ರಾಜ್ಯಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಈ ಚುನಾವಣೆಯಲ್ಲಿ ಜೆಡಿಎಸ್ ಗೆ ಮುಖಭಂಗ ಮಾಡಲೆಂದೇ ಸಿದ್ದರಾಮಯ್ಯ ಪಟ್ಟು ಹಿಡಿದು ಮನ್ಸೂರ್ ಅಲಿಖಾನ್ ಅವರನ್ನು ಎರಡನೇ ಅಭ್ಯರ್ಥಿಯನ್ನಾಗಿಸಿದ್ದರು ಎಂಬ ಮಾತುಗಳು ಈಗ ಕೇಳಿಬರುತ್ತಿವೆ. ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ನ ಮೊದಲ ಅಭ್ಯರ್ಥಿ ಜೈರಾಮ್ ರಮೇಶ್ ಗೆಲುವು ಖಚಿತವಾಗಿದ್ದು, ಎರಡನೇ ಅಭ್ಯರ್ಥಿಯ ಸೋಲು ನಿಶ್ಚಿತ ಎಂಬ ಅರಿವಿದ್ದರೂ ಸಹ ಮನ್ಸೂರ್ ಅವರನ್ನು ಕಣಕ್ಕೆ ಇಳಿಸಲಾಗಿತ್ತು.
ಲೆಹರ್ ಸಿಂಗ್ ಯಡಿಯೂರಪ್ಪನವರ ಆಪ್ತರಾಗಿದ್ದು, ಬಿಜೆಪಿಯ ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವರು ನಿರಾಯಾಸವಾಗಿ ಗೆಲವು ಸಾಧಿಸಿದ್ದಾರೆ. ಕೆಲ ದಿನಗಳ ಹಿಂದೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಫೋಟೋ ಒಂದು ವೈರಲ್ ಆಗಿದ್ದು, ಆ ಸಂದರ್ಭದಲ್ಲಿ ರಾಜ್ಯಸಭಾ ಚುನಾವಣೆಯ ಕುರಿತ ಚರ್ಚೆ ನಡೆದಿತ್ತು ಎನ್ನಲಾಗಿದೆ.
ಹೀಗಾಗಿಯೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಭೇಟಿಯ ಫೋಟೋ ಹಾಗೂ ವಿಡಿಯೋ ವೈರಲ್ ಮಾಡುವ ಮೂಲಕ ಯಾವ ಸಂದೇಶ ಸಾರಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದರು. ಜೆಡಿಎಸ್ ನ ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ಸಹ ಲೆಹರ್ ಸಿಂಗ್ ಅವರಿಗೆ ಮತ ಚಲಾಯಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ರಾಜ್ಯಸಭಾ ಚುನಾವಣೆ ಬಳಿಕ ಸಿ.ಟಿ. ರವಿ, ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದು ಆಕಸ್ಮಿಕವಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ತಂತ್ರಗಾರಿಕೆ ನಡೆಸಿ ಜೆಡಿಎಸ್ ನ ಕುಪೇಂದ್ರ ರೆಡ್ಡಿ ಸೋಲಿಗೆ ಕಾರಣರಾಗಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.