ಪ್ರಧಾನಿ ನರೇಂದ್ರ ಮೋದಿಯವರು ಆನ್ಲೈನ್ ಮೂಲಕ ಇಂದು ಡಿಜಿಟಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಲಿದ್ದು, ರಾಜ್ಯದ ನಾಲ್ಕು ಜಿಲ್ಲೆಗಳು ಸೇರಿದಂತೆ ದೇಶದ 75 ಕಡೆ ಈ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ. ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ, ರಾಯಚೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಡಿಜಿಟಲ್ ಬ್ಯಾಂಕ್ ಶಾಖೆಗಳು ಇಂದಿನಿಂದಲೇ ಗ್ರಾಹಕರ ಸೇವೆಗೆ ಲಭ್ಯವಾಗಲಿವೆ.
ದಿನದ 24 ಗಂಟೆ, ವಾರದ ರಜಾ ದಿನಗಳು, ಹಬ್ಬದ ಸೀಸನ್ಗಳಲ್ಲಿಯೂ ಇವುಗಳು ಕಾರ್ಯನಿರ್ವಹಿಸಲಿದ್ದು, ಹಾಲಿ ಇರುವ ಬ್ಯಾಂಕುಗಳ ಶಾಖೆಗಳಲ್ಲಿಯೇ ವಹಿವಾಟು ಡಿಜಿಟಲ್ ರೂಪದಲ್ಲಿ ನಡೆಯುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್, ಮೈಸೂರು ಹಾಗೂ ಮಂಗಳೂರಿನಲ್ಲಿ ಕರ್ನಾಟಕ ಬ್ಯಾಂಕ್ ಶಾಖೆಗಳು ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆ ನೀಡಲಿವೆ.
ಈ ಬ್ಯಾಂಕಿನ ಎಲ್ಲ ಸೇವೆಗಳು ಆನ್ಲೈನ್ ಮೂಲಕ ಡಿಜಿಟಲ್ ವ್ಯವಸ್ಥೆ ಅಡಿ ಪಡೆಯಬಹುದಾಗಿದ್ದು, ಕಾಗದ ರಹಿತವಾಗಿ ಕಾರ್ಯನಿರ್ವಹಿಸಲಿವೆ. ಸಾಲ ಸೌಲಭ್ಯ, ಎಟಿಎಂ ಮೂಲಕ ಹಣ ವಿತರಣೆ, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಎಲ್ಲ ಸೇವೆಯೂ ಕ್ಷಣಮಾತ್ರದಲ್ಲಿ ಸಿಗಲಿದೆ.
ಉದಾಹರಣೆಗೆ ಎಟಿಎಂ ಕಾರ್ಡ್ ಪಡೆಯಲು ಈ ಹಿಂದೆ ಖಾತೆ ತೆರೆದ ಬಳಿಕ ಒಂದು ವಾರಗಳ ಕಾಲ ತೆಗೆದುಕೊಳ್ಳುತ್ತಿತ್ತು. ಆದರೆ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಖಾತೆ ತೆರೆದ ಮರುಕ್ಷಣವೇ ಎಟಿಎಂ ಕಾರ್ಡ್ ಸಿಗಲಿದೆ. ದಿನದ 24 ಗಂಟೆಯೂ ಹಣ ಪಡೆಯುವ ಹಾಗೂ ಜಮಾ ಮಾಡುವ ಸೌಲಭ್ಯ ಡಿಜಿಟಲ್ ಬ್ಯಾಂಕಿಂಗ್ ನಲ್ಲಿ ಲಭ್ಯವಾಗಲಿದೆ.