ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಕರ್ನಾಟಕದ 30ನೇ ಸಿಎಂ ಆಗಿ ಬೊಮ್ಮಾಯಿ ಪದಗ್ರಹಣ ಮಾಡಿದ್ದಾರೆ.
ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಮಾಣವಚನ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರುಗಳಾದ ಆರ್.ಅಶೋಕ್, ಗೋವಿಂದ ಕಾರಜೋಳ, ಶ್ರೀರಾಮುಲು, ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ಪಾಲ್ಗೊಂಡಿದ್ದರು.
ಕರ್ನಾಟಕದ ಮಾಜಿ ಸಿಎಂ ಎಸ್.ಆರ್. ಬೊಮ್ಮಾಯಿ ಹಾಗೂ ಗಂಗಮ್ಮ ದಂಪತಿಯ ಹಿರಿಯ ಪುತ್ರನಾಗಿ ಜನವರಿ 28, 1960ರಲ್ಲಿ ಬಸವರಾಜ್ ಬೊಮ್ಮಾಯಿ ಜನಿಸಿದ್ದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಬೊಮ್ಮಾಯಿ ಕೃಷಿ ಹಾಗೂ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದವರು. ಜೆಡಿಯುನಲ್ಲಿ ಇದ್ದ ಬೊಮ್ಮಾಯಿ ಬಳಿಕ 2008ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕಾರಾಗಿ ಆಯ್ಕೆಯಾಗುವ ಮೂಲಕ ವಿಧಾನಸಭೆ ಪ್ರವೇಶಿಸಿದರು.
ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಬಸವರಾಜ್ ಬೊಮ್ಮಾಯಿ ಅವರನ್ನು ಜಲಸಂಪನ್ಮೂಲ ಹಾಗೂ ಸಹಕಾರ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಈ ಹಿಂದಿನ ಯಡಿಯೂರಪ್ಪ ಸಂಪುಟದಲ್ಲಿಯೂ ಗೃಹ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದವರು. ಇಂದು ರಾಜ್ಯದ ನೂತನ ಮುಖ್ಯಮತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.