ಬೆಂಗಳೂರು: ಬೆಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ನಡೆದ ಗಲಭೆ, ಪ್ರತಿಭಟನೆ ಪ್ರಕರಣಗಳಲ್ಲಿ ಕೆಲ ಅಮಾಯಕ ವಿದ್ಯಾರ್ಥಿಗಳು, ಯುವಕರ ವಿರುದ್ಧ ಕೇಸ್ ದಾಖಲಿಸಿ ಬಂಧಿಸಲಾಗಿದ್ದು, ಅವರನ್ನು ಬಿಡುಗಡೆ ಮಾಡುವಂತೆ ಶಾಸಕ ತನ್ವೀರ್ ಸೇಠ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣ, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದಿದ್ದ ಗಲಭೆ, ಪ್ರತಿಭಟನೆ ಪ್ರಕರಣದಲ್ಲಿ ಕೆಲ ಯುವಕರು, ವಿದ್ಯಾರ್ಥಿಗಳ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ. ಹೀಗಾಗಿ ಪ್ರಕರಣವನ್ನು ಮರು ಪರಿಶೀಲಿಸಿ, ನಿಯಮಾನುಸಾರ ಅಮಾಯಕರನ್ನು ಬಿಡುಗಡೆ ಮಾಡುವಂತೆ ಶಾಸಕ ತನ್ವೀರ್ ಸೇಠ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗೆ ಪತ್ರ ಬರೆದಿದ್ದಾರೆ.
ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಗೃಹ ಸಚಿವ ಪರಮೇಶ್ವರ್, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈ ಬಗ್ಗೆ ಪರಿಸೀಲಿಸಿ ನಿಯಮಾನುಸಾರವಾಗಿ ಕೇಸ್ ಹಿಂಪಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವಿಚಾರವಾಗಿ ಕಿಡಿಕಾರಿರುವ ಬಿಜೆಪಿ ನಾಯಕರು, ಶಾಸಕ ತನ್ವೀರ್ ಸೇಠ್ ಪತ್ರಕ್ಕೆ ಅನುಮೋದಿಸುವ ಮೂಲಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತುಷ್ಠೀಕರಣ ರಾಜಕಾರಣ ಮಾಡುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.