ಹಿಜಾಬ್ ವಿವಾದ ರಾಜಕೀಯ ವಿವಾದವಾಗಿ ಬದಲಾಗಿದೆ. ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷದ ನಾಯಕರು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಈಗ ರಾಜ್ಯ ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಸರಣಿ ಟ್ವೀಟ್ ಮಾಡಿದೆ.
ರಾಷ್ಟ್ರ ಧ್ವಜ ಇಳಿಸಿದ್ದಕ್ಕೆ ನಿಮ್ಮ ಬಳಿ ಪೂರಕ ಸಾಕ್ಷಿ ಇದೆಯೇ? ಸುಳ್ಳು ಸುದ್ದಿ ಹಬ್ಬಿಸಿ ಸಮಾಜದ ಅಶಾಂತಿಗೆ ಕಾರಣವಾಗಿದ್ದಕ್ಕೆ ದೇಶದ ಮುಂದೆ ಕ್ಷಮೆ ಯಾಚಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ರಾಜ್ಯ ಬಿಜೆಪಿ ಸವಾಲು ಹಾಕಿದೆ.
ಮಾಧ್ಯಮಗಳ ಎದುರು ಬಂದು “ರಾಷ್ಟ್ರ ಧ್ವಜವನ್ನು ಇಳಿಸಿ ಬಿಟ್ಟರಲ್ಲ ರೀ, ಎಂದು ಡಿ ಕೆ ಶಿವಕುಮಾರ್ ಅವರು ಸದಾರಮೆ ನಾಟಕವಾಡಿದಾಗಲೇ ರಾಜ್ಯದ ಜನತೆಗೆ ಅರ್ಥವಾಗಿತ್ತು. ಸುಳ್ಳೇ ಕಾಂಗ್ರೆಸ್ಸಿಗರ ಮನೆ ದೇವರು ಎಂಬ ಸತ್ಯ ದೇಶದ ಜನತೆಗೆ ಎಂದೋ ಅರಿವಾಗಿದೆ. ತಿರಂಗ ಧ್ವಜವನ್ನು ಅಪಮಾನಿಸಿದ ನೀವು ಈ ಬಗ್ಗೆ ಒಂದೋ ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ಸಾಕ್ಷ್ಯ ಒದಗಿಸಬೇಕು. ಸಾಕ್ಷ್ಯ ಒದಗಿಸುವಿರಾ ಡಿ ಕೆ ಶಿವಕುಮಾರ್ ಅವರೇ ಎಂದು ಪ್ರಶ್ನಿಸಿದೆ.
ಹಿಜಾಬ್ ಸಂಚಿನ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂಬುದಕ್ಕೆ ಈಗ ಮತ್ತೊಂದು ಸಾಕ್ಷ್ಯಾ ಲಭಿಸಿದೆ. ಹಿಜಾಬ್ ಜೊತೆಗೆ ತುಂಡುಡುಗೆಯ ಪರ ಪ್ರಿಯಾಂಕಾ ಗಾಂಧಿ ವಾದ ಮಂಡಿಸಿದ್ದಾರೆ. ಆದರೆ ಈಗ ಇರುವುದು ನಮ್ಮ ಧಿರಿಸಿನ ಪ್ರಶ್ನೆಯಲ್ಲ, ಶಾಲೆಯಲ್ಲಿ ಸಮವಸ್ತ್ರ ಧರಿಸುವ ಪ್ರಶ್ನೆ ಮಾತ್ರ ಎಂದು ಬಿಜೆಪಿ ಹೇಳಿದೆ.
ಕೇಸರಿ ಶಾಲುಗಳ ಬಗ್ಗೆ ಡಿಕೆಶಿ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಬಿಜೆಪಿ, ಕೊತ್ವಾಲ್ ಶಿಷ್ಯ ಈಗ ಹಿಟ್ & ರನ್ ರಾಜಕೀಯ ಪ್ರಾರಂಭಿಸಿದ್ದಾರೆ. ಬಿಜೆಪಿಯವರು ಸೂರತ್‌ನಿಂದ ಪೇಟಗಳನ್ನು ತರಿಸಿದ್ದಾರೆ ಎಂದು ಇನ್ನೊಂದು ಸುಳ್ಳು ಆರೋಪ ಮಾಡಿದ್ದಾರೆ.
ಡಿಕೆಶಿಯವರೇ, ಹಿಜಾಬ್ ವಿವಾದ ಮುಗಿಯುವವರೆಗೆ ಇನ್ನೆಷ್ಟು ಸುಳ್ಳು ಹೇಳುತ್ತೀರಿ. ಇದುವರೆಗೆ ಇಲ್ಲದ ಹಿಜಾಬ್ ವಿವಾದವನ್ನು ಸೃಷ್ಟಿಸಲು ವಿದ್ಯಾರ್ಥಿನಿಯರಿಗೆ ಹಿಜಾಬ್ ಪೂರೈಕೆ ಮಾಡಿದ್ದು ಕೆಪಿಸಿಸಿ ಕಚೇರಿಯಿಂದಲೇ? ಎಂದು ಪ್ರಶ್ನಿಸಿದ್ದಾರೆ.
ಹಿಜಾಬ್ ವಿವಾದದ ಹಿಂದಿರುವ ಧ್ವನಿಗಳು-
ಸಿದ್ದರಾಮಯ್ಯ, ರಾಹುಲ್ ಗಾಂಧಿ, ಪ್ರಿಯಾಂಕಾ, ಮಲಾಲಾ, ಕಮಲ್ ಹಾಸನ್, ಅಲ್ ಜಜೀರಾ. ಇದೆಲ್ಲವೂ ಭಾರತ ವಿರೋಧಿ ಟೂಲ್ ಕಿಟ್ ಗ್ಯಾಂಗ್. ಒಡೆದು ಅಳುವ ನೀತಿ ಕಾಂಗ್ರೆಸ್ ಪಕ್ಷದ ಹುಟ್ಟು ಗುಣ. ಯುವ ಜನಾಂಗ ಈ ರೀತಿ ಇಬ್ಭಾಗವಾಗಲು ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.