
ಬೆಂಗಳೂರು: ಮ್ಯುಟೇಷನ್ ಮಾಹಿತಿಗಳ ಸ್ವಯಂಚಾಲಿತ ಪರಿಷ್ಕರಣೆ ಹೊಸ ವ್ಯವಸ್ಥೆ ಇಂದಿನಿಂದ ಜಾರಿಯಾಗಲಿದೆ. ಏಪ್ರಿಲ್ 1ರಿಂದ ಪಹಣಿಗೆ ಆಧಾರ್ ಜೋಡಣೆ ಕಾರ್ಯ ಕೈಗೊಳ್ಳುವುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಗಳಲ್ಲಿ ಆಸ್ತಿ ಮೇಲೆ ಸಾಲ ಪಡೆಯುವುದು ಸೇರಿದಂತೆ ಇನ್ನಿತರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪಹಣಿಯಲ್ಲಿ ದಾಖಲಿಸುವ ಕ್ರಮವನ್ನು ಸ್ವಯಂ ಚಾಲಿತ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಜನರು ಸಣ್ಣ ಕೆಲಸಗಳಿಗೆ ಗ್ರಾಮಲೆಕ್ಕಿಗ ಸೇರಿ ಇನ್ನಿತರ ಸರ್ಕಾರಿ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ ಎಂದು ಹೇಳಿದ್ದಾರೆ.
ಬ್ಯಾಂಕುಗಳಲ್ಲಿ ಸಾಲ ಪಡೆದರೆ, ತೀರಿಸಿದರೆ, ಆಸ್ತಿ ವಿಭಾಗ ಮಾಡಿದರೆ ಅಥವಾ ಒತ್ತೆ ಇಟ್ಟರೆ ಅಂತಹ ಸಂದರ್ಭದಲ್ಲಿ ಅದರ ವಿವರವನ್ನು ಪಹಣಿಯಲ್ಲಿ ದಾಖಲಿಸಬೇಕು. ಕಂದಾಯ ಅಧಿಕಾರಿ ಬೆರಳಚ್ಚು ಕೊಡಬೇಕು. ಇನ್ನು ಮುಂದೆ ವಿವಿಧ ಮೂಲಗಳಿಂದ ಮಾಹಿತಿ ಪಡೆದು ಸ್ವಯಂ ಚಾಲಿತವಾಗಿ ಮಾಹಿತಿ ಸೇರ್ಪಡೆ ಮಾಡಲಾಗುವುದು. ಜನರು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿಲ್ಲ ಎಂದು ತಿಳಿಸಿದ್ದಾರೆ.
ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಈಗಾಗಲೇ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. 15 ಲಕ್ಷ ಪಹಣಿದಾರರನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಲು ಕೋರಲಾಗಿದ್ದು, ಏಪ್ರಿಲ್ 1ರಿಂದ ಅಧಿಕೃತವಾಗಿ ನನ್ನ ಆಸ್ತಿ ಹೆಸರಲ್ಲಿ ನನ್ನ ಭೂಮಿ ನನ್ನ ಗುರುತು ಎಂಬ ಉದ್ದೇಶದೊಂದಿಗೆ ಆಧಾರ್ ಜೋಡಣೆ ಕಾರ್ಯ ಆರಂಭಿಸಲಾಗುವುದು. ರಾಜ್ಯಾದ್ಯಂತ ಗ್ರಾಮ ಲೆಕ್ಕಿಗರು ಪಹಣಿದಾರರ ಮನೆಗೆ ತೆರಳಿ ಆಧಾರ್ ಜೋಡಣೆ ಹಾಗೂ ಅದರ ಅನುಕೂಲವನ್ನು ಮನವರಿಕೆ ಮಾಡಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.