ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಬೆನ್ನಲ್ಲೇ ರಾಜ್ಯದ ಜನತೆಗೆ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದ ‘ನಮ್ಮ ಕ್ಲಿನಿಕ್’ ಯೋಜನೆ ಸದ್ದಿಲ್ಲದೇ ಆರಂಭಗೊಂಡಿದ್ದು, ಜುಲೈ 28 ರಿಂದ ಬೆಂಗಳೂರಿನ ಎರಡು ಭಾಗಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಆರಂಭಿಸಲಾಗಿದೆ.
ರಾಜ್ಯದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ನಮ್ಮ ಕ್ಲಿನಿಕ್ ಯೋಜನೆ ಆರಂಭಿಸಲಾಗಿದ್ದು, ರಾಜ್ಯದ ಒಟ್ಟು 438 ಕಡೆ ಇವುಗಳು ಆರಂಭವಾಗಲಿದೆ. ಈ ಪೈಕಿ ಬೆಂಗಳೂರಿನಲ್ಲಿ 243 ವಾರ್ಡ್ ಗಳಲ್ಲಿ ‘ನಮ್ಮ ಕ್ಲಿನಿಕ್’ ಸಾರ್ವಜನಿಕರಿಗೆ ಸೇವೆ ನೀಡಲಿವೆ. ಪ್ರತಿ ಕೇಂದ್ರದಲ್ಲಿ ಓರ್ವ ವೈದ್ಯ, ನರ್ಸ್, ಲ್ಯಾಬ್ ತಂತ್ರಜ್ಞ, ಡಿ ಗ್ರೂಪ್ ಸಿಬ್ಬಂದಿ ಇರಲಿದ್ದು 12 ರೀತಿಯ ಆರೋಗ್ಯ ಸೇವೆ ಮತ್ತು 14 ವಿಧದ ಪ್ರಯೋಗ ನಡೆಸಲು ಇಲ್ಲಿ ಅವಕಾಶವಿರಲಿದೆ.
ಇಲ್ಲಿಗೆ ಬರುವ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಜೊತೆಗೆ ಉಚಿತ ಔಷಧಿ ಲಭ್ಯವಿರಲಿದ್ದು, ಪ್ರತಿ ಕ್ಲಿನಿಕ್ ನಿರ್ವಹಣೆಗೆ ರಾಜ್ಯ ಸರ್ಕಾರ ವಾರ್ಷಿಕ 36 ಲಕ್ಷ ರೂಪಾಯಿಗಳನ್ನು ನೀಡುತ್ತದೆ. ಈಗಾಗಲೇ ಇದಕ್ಕೆ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಮುಂದಿನ ಮೂರು ತಿಂಗಳಿನಲ್ಲಿ ರಾಜ್ಯದಾದ್ಯಂತ ಇವುಗಳು ಆರಂಭವಾಗಲಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡು ತಿಂಗಳಲ್ಲಿ ಎಲ್ಲ ವಾರ್ಡ್ ಗಳ ವ್ಯಾಪ್ತಿಯಲ್ಲಿ ‘ನಮ್ಮ ಕ್ಲಿನಿಕ್’ ಆರಂಭಿಸುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದಾರೆ.