ರಾಜ್ಯದಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು, ರಾಜ್ಯ ರಾಜಧಾನಿಯಲ್ಲೂ ಧಾರಾಕಾರ ಮಳೆಯಿಂದ ಜನಜೀವನ ಅಸ್ತ್ಯವಸ್ತವಾಗಿದೆ. ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆತಂಕ ಮೂಡಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಮಳೆ ಮುಂದುವರೆದಿರುವ ಕಾರಣ ಹಳ್ಳ ಕೊಳ್ಳಗಳು, ಕೆರೆ ನದಿಗಳು ತುಂಬಿ ಹರಿಯುತ್ತಿದ್ದು, ಜಮೀನಿಗಳಿಗೂ ಸಹ ನೀರು ನುಗ್ಗಿದೆ. ಇದರ ಪರಿಣಾಮ ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆ ನಷ್ಟವಾಗಿದ್ದು ಅನ್ನದಾತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ಈ ಹಿಂದೆಯೂ ಸಹ ಜಮೀನುಗಳಿಗೆ ನೀರು ನಿಂತಿದ್ದ ಪರಿಣಾಮ ನಷ್ಟ ಅನುಭವಿಸಿದ್ದ ರೈತರು, ಈಗ ಮತ್ತೆ ಮಳೆಯಾಗುತ್ತಿರುವ ಕಾರಣ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜೊತೆಗೆ ಅಳಿದುಳಿದ ಬೆಳೆಗೆ ರೋಗ ಸಹ ತಗುಲಿದ್ದು, ಬೆಳೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಕಂಗಾಲಾಗಿದ್ದಾರೆ.
ರಾಜ್ಯ ಸರ್ಕಾರ ಬೆಳೆ ನಷ್ಟಕ್ಕೆ ಕೂಡಲೇ ಪರಿಹಾರ ನೀಡಬೇಕೆಂಬ ಒತ್ತಾಯ ಕೇಳಿ ಬರುತ್ತಿದ್ದು, ಜೊತೆಗೆ ಕೆಲವೆಡೆ ಮನೆ ಕುಸಿದಿರುವ ಪರಿಣಾಮ, ಹಲವರಿಗೆ ಸೂರಿಲ್ಲದಂತಾಗಿದೆ.