ರಾಜ್ಯದಲ್ಲಿ ನೂತನವಾಗಿ 50 ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಈ ಪೈಕಿ 12 ಕಾಲೇಜುಗಳನ್ನು ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾವೇರಿಗೆ ಮಂಜೂರು ಮಾಡಲಾಗಿದೆ.
ಪ್ರಸಕ್ತ ಸಾಲಿನಲ್ಲಿ 46 ಹೊಸ ಕಾಲೇಜುಗಳ ಮಂಜೂರಾತಿಗಾಗಿ ಅನುಮತಿ ಕೋರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಇದೀಗ ಮತ್ತೆ ನಾಲ್ಕು ಕಾಲೇಜುಗಳನ್ನು ಸೇರ್ಪಡೆ ಮಾಡಿ ಒಟ್ಟು 50 ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ.
ಈ ಪೈಕಿ ಹಾವೇರಿ ಜಿಲ್ಲೆಯಲ್ಲಿ 12 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಆರಂಭವಾಗಲಿದ್ದರೆ, ಇನ್ನುಳಿದಂತೆ ಕೊಪ್ಪಳ ಜಿಲ್ಲೆಯಲ್ಲಿ 9, ಬೆಳಗಾವಿ ಜಿಲ್ಲೆಯಲ್ಲಿ 7, ದಾವಣಗೆರೆ ಜಿಲ್ಲೆಯಲ್ಲಿ 4, ರಾಯಚೂರು ಜಿಲ್ಲೆಯಲ್ಲಿ 3, ವಿಜಯಪುರ ಜಿಲ್ಲೆಯಲ್ಲಿ 3, ಉತ್ತರ ಕನ್ನಡ ಜಿಲ್ಲೆಯಲ್ಲಿ 2, ಮೈಸೂರು ಜಿಲ್ಲೆಯಲ್ಲಿ 2, ಯಾದಗಿರಿ ಜಿಲ್ಲೆಯಲ್ಲಿ 2, ಬಾಗಲಕೋಟೆ ಜಿಲ್ಲೆಯಲ್ಲಿ 2, ಕಲಬುರಗಿ ಜಿಲ್ಲೆಯಲ್ಲಿ 2, ಚಿತ್ರದುರ್ಗ ಜಿಲ್ಲೆಯಲ್ಲಿ 1 ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 1 ಕಾಲೇಜು ಆರಂಭವಾಗಲಿವೆ.