ಬೆಂಗಳೂರು: ರಾಜ್ಯದಲ್ಲಿ ಧ್ವನಿವರ್ಧಕ, ಮಸೀದಿ ಮೈಕ್ ವಿಚಾರ ಮತ್ತೆ ತಾರಕಕ್ಕೇರಿದ್ದು, 15 ದಿನಗಳ ಗಡುವು ಮುಗಿದರೂ ಸರ್ಕಾರ ಕಟ್ಟುನಿಟ್ಟಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಉಗ್ರ ಹೋರಾಟಕ್ಕೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಮಸೀದಿಗಳಲ್ಲಿನ ಮೈಕ್ ತೆರವಿಗೆ ನೀಡಲಾಗಿದ್ದ ಎಲ್ಲಾ ಗಡುವುಗಳು ಮುಗಿದು ಹೋಗಿವೆ. ಸರ್ಕಾರ ನೀಡಿದ ನೋಟೀಸ್ ಗೂ ಯಾರೂ ಬಗ್ಗುತ್ತಿಲ್ಲ. ಅಂದರೆ ರಾಜ್ಯ ಸರ್ಕಾರಕ್ಕೆ ಆಜಾನ್ ಮೈಕ್, ಧ್ವನಿವರ್ಧಕಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಬಿಜೆಪಿ ಸರ್ಕಾರ ವಿಫಲವಾಗಿದೆ ಹೀಗಾಗಿ ಜೂನ್.8ರಂದು ಬಿಜೆಪಿ ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಆಜಾನ್ ಗೆ ಪ್ರತಿಯಾಗಿ ಸುಪ್ರಭಾತ ಅಭಿಯಾನಕ್ಕೆ ಮಣಿದು ಸರ್ಕಾರ ಧ್ವನಿವರ್ಧಕ ತೆರವುಗೊಳಿಸಲು ಆದೇಶ ಹೊರಡಿಸಿತ್ತು. ಆದರೆ ಸರ್ಕಾರದ ಆದೇಶವನ್ನು ಸರಿಯಾಗಿ ಪಾಲಿಸಿಲ್ಲ. ಇಂದಿಗೂ ಮುಂಜಾನೆಯಾಗುತ್ತಿದ್ದಂತೆ ಆಜಾನ್ ಮಾರ್ಧನಿಸುತ್ತಿದೆ. ತಕ್ಷಣ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸರ್ಕಾರದ ಆದೇಶ ಪಾಲಿಸುವಂತೆ ಸೂಚಿಸಬೇಕು, ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರದ ಮೃಧು ಧೋರಣೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಜೂನ್ 8ರಂದು ಉಗ್ರ ಹೋರಾಟಕ್ಕೆ ಕರೆ ನೀಡಲಾಗಿದೆ. ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುತಾಲಿಕ್ ಗುಡುಗಿದ್ದಾರೆ.