ಬೆಂಗಳೂರು: ರಾಜ್ಯದಲ್ಲಿ ದಾಖಲಾಗಿರುವ ಪೊಲೀಸ್ ಪ್ರಕರಣಗಳಲ್ಲಿ ಶೇ.20ಕ್ಕೂ ಹೆಚ್ಚು ಸೈಬರ್ ಕ್ರೈಂ ಗೆ ಸಂಬಂಧಿಸಿದ ಅಪರಾಧ ಪ್ರಕರಣಗಳೇ ದಾಖಲಾಗಿವೆ ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ತಿಳಿಸಿದ್ದಾರೆ.
ಇದಕ್ಕೆ ಪ್ರಮುಖ ಕಾರಣ ಎನ್ನುವುದಾದರೆ ಶಿಕ್ಷಣದ ಕೊರತೆ ಹಾಗೂ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಿಂದ ಬಂದವರಿಂದ ಹೆಚ್ಚಿನ ಅಪರಾಧ ಪ್ರಕರಣಗಳು ವರದಿಯಾಗುತ್ತಿದೆ ಎಂಬುದು ಗಮನಾರ್ಹ ಅಂಶ ಎಂದಿದ್ದಾರೆ.
ರಾಜ್ಯ ಸರ್ಕಾರ ಈಗ ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆಗಳನ್ನು ಘೋಷಿಸಿದೆ ಈ ಯೋಜನೆಯ ಹೆಸರಲ್ಲಿ ನಕಲಿ ಆಪ್ ಗಳು ಸೃಷ್ಟಿಯಾಗಿವೆ. ಅಂತಹ ಆಪ್ ಗಳ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸೈಬರ್ ಭದ್ರತೆ ಕುರಿತ ವಿಚಾರ ಸಂಕಿರಣದಲ್ಲಿ ಮಾಹಿತಿ ನೀಡಿದ್ದಾರೆ.
ಟ್ರೋಲಿಂಗ್, ಸೇಡು ತೀರಿಸಿಕೊಳ್ಳುವ ಉದ್ದೇಶಕ್ಕೆ, ಅಶ್ಲೀಲತೆ, ಸ್ಕಿಮ್ಮಿಂಗ್, ಫಿಶಿಂಗ್, ಸೈಬರ್ ಬುಲ್ಲಿಂಗ್ ಹಾಗೂ ಇತರ ಪ್ರಕರಣಗಳ ಅಡಿಯಲ್ಲಿ 45 ವಿಧದ ಸೈಬರ್ ಪ್ರಕರಣಗಳು ವರದಿಯಾಗಿವೆ. ಕಾಲೇಜು ಬಿಟ್ಟವರು, ನಿರುದ್ಯೋಗಿಗಳು ಸೈಬರ್ ಅಪರಾಧಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಸೈಬರ್ ಅಪರಾಧಗಳಲ್ಲಿ ಶ್ರೀಮಂತರು, ತುಂಬಾ ಬಡವರು ಕೂಡ ಇದ್ದಾರೆ. ಸುಮಾರು 70 ಪ್ರತಿಶತ ಪ್ರಕರಣಗಳು ಪತ್ತೆಯಾಗಿದ್ದು, ಸೈಬರ್ ಅಪರಾಧ ನಿಭಾಯಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ.