ದಾವಣಗೆರೆ: ನಮ್ಮಲ್ಲಿ ಕೆಲ ನಾಯಕರು ಸಚಿವರಾದವರೇ ಮತ್ತೆ ಮತ್ತೆ ಸಚಿವರಾಗುತ್ತಿದ್ದಾರೆ. ಈ ಪದ್ಧತಿ ಬದಲಾಗಬೇಕು. ಹಾಗಾಗಿ ರಾಜ್ಯದಲ್ಲಿ ಗುಜರಾತ್ ಮಾದರಿಯಲ್ಲಿ ಸಚಿವ ಸಂಪುಟ ರಚನೆಯಾಗಬೇಕು ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ನನ್ನ ಆಗ್ರಹವೆಂದರೆ ಕರ್ನಾಟಕದಲ್ಲಿ ಸಿಎಂ ಸ್ಥಾನ ಹೊರತುಪಡಿಸಿ ಗುಜರಾತ್ ಮಾದರಿ ಸಂಪುಟ ರಚನೆಯಾಗಬೇಕು. ಹೊಸ ಮುಖಗಳಿಗೆ ಸಂಪುಟದಲ್ಲಿ ಸ್ಥಾನ ದೊರೆಯಬೇಕು. ಸಚಿವರಾದವರು ಪಕ್ಷ ಸಂಘಟನೆಗೆ ಶ್ರಮಿಸಬೇಕು. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರು.
ಇದೇ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಬಗ್ಗೆ ಸ್ವತಃ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಎಂದರೆ ಮಕ್ಕಳಾಟದಂತಾಗಿದೆ. ಮಕ್ಕಳಿಗೆ ಜಾತ್ರೆಯಲ್ಲಿ ಕಾರು ಕೊಡಿಸಿದಂತೆ ನನಗೆ ಕಾರು ಕೊಟ್ಟಿದ್ದಾರೆ, ಮನೆ ಕೊಟ್ಟಿದ್ದಾರೆ, ಜನಪರ ಕೆಲಸ ಮಾಡಲು ಮಾತ್ರ ಆಗುತ್ತಿಲ್ಲ. ಹಾಗಾಗಿ ನನಗೆ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ ಎಂದು ಹೇಳಿದರು.
ಶಾಸಕಾಂಗ ಸಭೆಯಲ್ಲಿಯೂ ಸಚಿವ ಸ್ಥಾನ ನೀಡುವಂತೆ ವಿಚಾರ ಪ್ರಸ್ತಾಪಿಸಿದ್ದೇನೆ. ಹಾಗಂತ ಹಿಂದಿನಂತೆ ಈ ಬಾರಿ ರೆಸಾರ್ಟ್ ರಾಜಕಾರಣ ಮಾಡಲ್ಲ. ನನ್ನ ವಾದವನ್ನು ನಾಲ್ಕು ಗೋಡೆ ಮಧ್ಯೆಯೇ ಹೇಳುತ್ತೇನೆ ಎಂದು ತಿಳಿಸಿದ್ದಾರೆ.