ಗುರುವಾರದಂದು ರಾಜ್ಯದಲ್ಲಿ ಇಬ್ಬರಿಗೆ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪೈಕಿ ಒಬ್ಬರು ಒಮಿಕ್ರಾನ್ ಮೂಲ ಸ್ಥಾನವಾಗಿರುವ ದಕ್ಷಿಣ ಅಫ್ರಿಕಾದಿಂದ ಬಂದವರಾಗಿದ್ದರೆ ಮತ್ತೊಬ್ಬರಿಗೆ ಪ್ರಯಾಣದ ಯಾವುದೇ ಇತಿಹಾಸವಿರಲಿಲ್ಲವೆಂದು ತಿಳಿದುಬಂದಿದೆ.
ದಕ್ಷಿಣ ಆಫ್ರಿಕಾದಿಂದ ನವೆಂಬರ್ 20 ರಂದು ರಾಜ್ಯಕ್ಕೆ ಆಗಮಿಸಿದ್ದ ಪ್ರಯಾಣಿಕರೊಬ್ಬರಿಗೆ ಪರೀಕ್ಷೆ ಮಾಡಿದ ಸಂದರ್ಭದಲ್ಲಿ ವರದಿ ಪಾಸಿಟಿವ್ ಬಂದಿದ್ದರೂ ಲಕ್ಷಣ ರಹಿತವಾಗಿತ್ತು ಎನ್ನಲಾಗಿದೆ. ನಂತರ ನವೆಂಬರ್ 23 ರಂದು ಖಾಸಗಿ ಲ್ಯಾಬ್ ನಲ್ಲಿ ಪರೀಕ್ಷೆ ಮಾಡಿಸಿದಾಗ ವರದಿ ನೆಗೆಟಿವ್ ಬಂದಿದೆ. ಇದೀಗ ಇವರಿಗೆ ಒಮಿಕ್ರಾನ್ ತಗುಲಿರುವುದು ದೃಢಪಟ್ಟಿದ್ದು, ಇವರು 24 ಪ್ರಾಥಮಿಕ ಹಾಗೂ 240 ವ್ಯಕ್ತಿಗಳೊಂದಿಗೆ ದ್ವಿತೀಯ ಸಂಪರ್ಕ ಹೊಂದಿದ್ದು, ಅವರುಗಳಿಗೂ ಪರೀಕ್ಷೆ ಮಾಡಲಾಗಿದೆ. ಆದರೆ ಯಾರಿಗೂ ವರದಿ ಪಾಸಿಟಿವ್ ಬಂದಿಲ್ಲ.
ಇನ್ನು ಮತ್ತೊಂದು ಒಮಿಕ್ರಾನ್ ಪ್ರಕರಣದಲ್ಲಿ ವೈದ್ಯರೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಇವರೊಂದಿಗೆ ಸಂಪರ್ಕ ಹೊಂದಿದ್ದ 5 ಮಂದಿಯ ವರದಿ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಹೀಗಾಗಿ 6 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಹೆಚ್ಚಿನ ಸಮಸ್ಯೆ ಕಂಡುಬಂದಿಲ್ಲ.
ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸಸವರಾಜ ಬೊಮ್ಮಾಯಿ ಅಧಿಕಾರಿಗಳ ಜೊತೆ ಇಂದು ಸಭೆ ನಡೆಸಲಿದ್ದು, ಅಗತ್ಯ ಬಿದ್ದರೆ ಕೋವಿಡ್ ಮಾರ್ಗಸೂಚಿಗಳಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.