ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಭಾರಿ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಮಳೆ ಹಾನಿ ಕುರಿತಾಗಿ ನಿನ್ನೆ ಅಧಿಕಾರಿಗಳ ಜತೆ ಸಭೆ ನಡೆಸಿ ಮುಂಜಾಗೃತಾ ಕ್ರಮ ಹಾಗೂ ಪರಿಹಾರದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ಇಂದು ಸ್ವಲ್ಪ ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದೆ. ಆದರೆ ಇನ್ನೂ 2-3 ದಿನಗಳ ಕಾಲ ಹಲವೆಡೆ ಮಳೆಯಾಗಲಿದೆ. ಅದಕ್ಕೆ ಅನುಗುಣವಾಗಿ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಇಂದೂ ಕೂಡ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮಳೆ ಅಬ್ಬರದ ನಡುವೆ ಉತ್ತರ ಕರ್ನಾಟಕ ಭಾಗದಲ್ಲಿ ಭೂಕಂಪನ ಸಂಭವಿಸಿದ್ದು, ಬೆಳಗಾವಿ ಜಿಲ್ಲೆ ಅಥಣಿ, ವಿಜಯಪುರ, ಬಾಗಲಕೋಟೆಯ ಹಲವೆಡೆ ಭೂಮಿ ಕಂಪಿಸಿದೆ.