ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಜಯಭೇರಿ ಬಾರಿಸಿದ ಬಳಿಕ ಬಿಜೆಪಿ ಹಿರಿಯ ನಾಯಕರು ರಾಜ್ಯದಲ್ಲಿಯೂ ಅವಧಿಪೂರ್ವ ಚುನಾವಣೆಗೆ ಉತ್ಸುಕರಾಗಿದ್ದಾರೆ ಎಂಬ ಮಾಹಿತಿಯನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ತಳ್ಳಿ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅವಧಿ ಪೂರ್ವ ಚುನಾವಣೆಯನ್ನು ಮಾಡುವುದಿಲ್ಲ. ರಾಷ್ಟ್ರೀಯ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದೇ ಅಂತಿಮ. ಸದ್ಯಕ್ಕಂತೂ ಅವಧಿಪೂರ್ವ ಚುನಾವಣೆಯ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಉತ್ತಮ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಪ್ರಶ್ನೆ ಉದ್ಭವಿಸೋದೇ ಇಲ್ಲ. ಆದರೆ ರಾಜ್ಯದಲ್ಲಿ ಸಂಪುಟ ಪುನರ್ರಚನೆ ಆಗಬೇಕೆಂಬುದು ಅನೇಕ ಶಾಸಕರ ಅಭಿಪ್ರಾಯವಾಗಿದೆ. ನಾನು ಅವಕಾಶವಾದಿಯಲ್ಲ. ನಾನೊಬ್ಬ ಆಶಾವಾದಿ ಎಂದು ಹೇಳಿದರು.