ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಕೆ.ಎಸ್. ಈಶ್ವರಪ್ಪ ಶುಕ್ರವಾರದಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಶಿವಮೊಗ್ಗದಿಂದ ಬೆಂಬಲಿಗರ ದೊಡ್ಡ ದಂಡಿನೊಂದಿಗೆ ಬಂದ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡುವ ಮುನ್ನ ತಮ್ಮ ಬೆಂಬಲಿಗರ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈಶ್ವರಪ್ಪನವರ ಜೊತೆ 150 ವಾಹನಗಳಲ್ಲಿ ಬೆಂಬಲಿಗರು ಆಗಮಿಸಿದ್ದು, ತಮ್ಮ ನಾಯಕನಿಗೆ ಸಾಥ್ ನೀಡಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಸಂಜೆ ವೇಳೆಗೆ ರಾಜೀನಾಮೆ ಪತ್ರದೊಂದಿಗೆ ಬಂದ ಈಶ್ವರಪ್ಪ ಅದನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಏಪ್ರಿಲ್ 21ರಂದು ಶಿವಮೊಗ್ಗದಲ್ಲಿ ನಡೆಯುವ ತಮ್ಮ ಮೊಮ್ಮಗ ಪೃಥ್ವಿರಾಜ್ ಅವರ ವಿವಾಹ ಆಮಂತ್ರಣ ಪತ್ರಿಕೆಯನ್ನೂ ಬೊಮ್ಮಾಯಿ ಅವರಿಗೆ ಈಶ್ವರಪ್ಪ ನೀಡಿದ್ದಾರೆ.