ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪನವರ ತಲೆದಂಡವಾಗಿದೆ. ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಈಶ್ವರಪ್ಪ ಇಂದು ಸಂಜೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಅದಕ್ಕೂ ಮುನ್ನ ತಮ್ಮ ಬೆಂಬಲಿಗರ ಮೂಲಕ ಬಲ ಪ್ರದರ್ಶನ ಮಾಡಲಿದ್ದಾರೆಂದು ಹೇಳಲಾಗುತ್ತಿದೆ.
ಈಶ್ವರಪ್ಪನವರು ರಾಜೀನಾಮೆ ನೀಡುವ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ತಮ್ಮ ನೂರಾರು ಬೆಂಬಲಿಗರ ಜೊತೆ ತೆರಳಿ ಬಳಿಕ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಮುನ್ನ ಕಳಿಸಿದ ವಾಟ್ಸಾಪ್ ಸಂದೇಶದಲ್ಲಿ ತಮ್ಮ ಸಾವಿಗೆ ನೇರ ಕಾರಣ ಈಶ್ವರಪ್ಪ ಎಂದು ಹೇಳಿರುವುದು ರಾಜೀನಾಮೆಗೆ ಪ್ರಮುಖ ಕಾರಣವೆನ್ನಲಾಗಿದೆ.
ಮುಂದಿನ ವರ್ಷ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದಕ್ಕೆ ಬಿಜೆಪಿ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿರುವಾಗಲೇ ಶೇ.40 ಕಮೀಷನ್ ಆರೋಪ ಕೇಳಿ ಬಂದಿರುವುದು ಬಿಜೆಪಿ ಹೈಕಮಾಂಡ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕರೆ ಮಾಡಿ ಈಶ್ವರಪ್ಪರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದರೆಂದು ಹೇಳಲಾಗಿದೆ.