ರಾಜೀನಾಮೆ ಕೊಡದೇ ಅಧಿಕಾರದಲ್ಲಿ ಮುಂದುವರಿಯಲು ಪಟ್ಟು ಹಿಡಿದಿದ್ದ ಇಮ್ರಾನ್ ಖಾನ್ ನಂತರ ಅವಿಶ್ವಾಸ ನಿರ್ಣಯದಲ್ಲಿ ಸೋತಿದ್ದು ಗೊತ್ತೇ ಇದೆ. ಪಾಕಿಸ್ತಾನ ಪ್ರಧಾನಿ ಕುರ್ಚಿ ಕಳೆದುಕೊಂಡಿದ್ದು ಮಾತ್ರವಲ್ಲ, ಅವಿಶ್ವಾಸ ನಿರ್ಣಯಕ್ಕೂ ಮುನ್ನ ಇಮ್ರಾನ್ ಖಾನ್‌ಗೆ ಕಪಾಳ ಮೋಕ್ಷವೂ ಆಗಿದೆಯಂತೆ.
ಅವಿಶ್ವಾಸ ನಿರ್ಣಯದ ಮೇಲಿನ ಮತದಾನದ ಹಿಂದಿನ ರಾತ್ರಿ ಇಮ್ರಾನ್ ಖಾನ್ ಅವರ ಮನೆಗೆ ನುಗ್ಗಿ ಕಪಾಳಮೋಕ್ಷ ಮಾಡಲಾಗಿದೆ ಅಂತ ಅಲ್ಲಿನ ಮಾಧ್ಯಮಗಳಲ್ಲಿ ಚರ್ಚೆ ಆಗ್ತಾ ಇದೆ. ಆ ಕಪಾಳ ಮೋಕ್ಷವೇ ಇಮ್ರಾನ್ ಖಾನ್ ಪ್ರಧಾನಿ ಕುರ್ಚಿ ಬಿಡಲು ಕಾರಣ ಅಂತ ಹೇಳಲಾಗ್ತಾ ಇದೆ.
ಎಪ್ರಿಲ್ 9ರ ರಾತ್ರಿ, ಬನಿಗಾಲದಲ್ಲಿರೋ ಇಮ್ರಾನ್ ಅವರ ಮನೆಯ ಹುಲ್ಲುಹಾಸಿನಲ್ಲಿ ಹೆಲಿಕಾಪ್ಟರ್ ಇಳಿದಿದೆ. ಅದರಲ್ಲಿ ಇನ್ನಿಬ್ಬರು ಪ್ರಮುಖ ಮುಖಂಡರಿದ್ದರು. ಇಮ್ರಾನ್ ಖಾನ್‌ರನ್ನು ಪ್ರತ್ಯೇಕ ಕೋಣೆಯಲ್ಲಿ ಭೇಟಿಯಾದ್ರು. ರಾಜೀನಾಮೆ ಕೊಡುವಂತೆ ಇಮ್ರಾನ್ ಖಾನ್‌ರನ್ನು ಕೇಳಿದ್ದಾರೆ. ಆದ್ರೆ ಅದಕ್ಕೆ ಇಮ್ರಾನ್ ಖಾನ್ ಒಪ್ಪದೇ ಇದ್ದಿದ್ರಿಂದ ವಾಗ್ವಾದ ನಡೆದಿದೆ. ಅವರಲ್ಲೊಬ್ಬ ಇಮ್ರಾನ್ ಕೆನ್ನೆಗೆ ಬಾರಿಸಿದ್ದಾನೆ.
ಇಮ್ರಾನ್ ಅವರ ಎಡಗಣ್ಣಿನ ಕೆಳಗೆ ಗಾಯದ ಗುರುತು ಹೇಗೆ ಬಂತು ಎಂಬ ಬಗ್ಗೆ ಪಾಕಿಸ್ತಾನದ ಜಾಲತಾಣಗಳಲ್ಲಿ ಚರ್ಚೆಯಾಗ್ತಿತ್ತು. ಅದಾಗಿ ಎರಡು ದಿನಗಳ ಕಾಲ ಇಮ್ರಾನ್ ಖಾನ್ ಸನ್ ಗ್ಲಾಸ್ ಹಾಕಿಕೊಂಡೇ ಇದ್ದಿದ್ಯಾಕೆ ? ಇಂತಹ ಪ್ರಶ್ನೆಗಳೆಲ್ಲಾ ಈಗ ಹುಟ್ಟಿಕೊಂಡಿವೆ. ಏಪ್ರಿಲ್ 9ರ ರಾತ್ರಿ, ಪಾಕಿಸ್ತಾನ ಸೇನೆ ರಾಜೀನಾಮೆ ನೀಡುವಂತೆ ಇಮ್ರಾನ್ ಖಾನ್‌ಗೆ ಆದೇಶ ಕಳುಹಿಸಿತ್ತು. ಆದರೆ ಇಮ್ರಾನ್ ಒಪ್ಪಲಿಲ್ಲ.
ಬದಲಾಗಿ ಸೇನಾ ಮುಖ್ಯಸ್ಥ ಕಮರ್ ಜಾವೇದ್‌ನನ್ನೇ ವಜಾ ಮಾಡಲು ಇಮ್ರಾನ್ ನಿರ್ಧರಿಸಿದ್ದರು. ಸ್ನೇಹಿತ ಜನರಲ್ ಫೈಜ್ ಹಮೀದ್‌ರನ್ನು ಸೇನಾ ಮುಖ್ಯಸ್ಥರನ್ನಾಗಿ ಮಾಡಲು ಮುಂದಾಗಿದ್ರು. ಈ ವಿಚಾರ ಗೊತ್ತಾಗ್ತಿದ್ದಂತೆ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಹಾಗೂ ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಮ್, ಇಮ್ರಾನ್ ಮನೆಗೇ ಬಂದಿಳಿದಿದ್ದಾರೆ.
ಕೊಠಡಿಯೊಂದರಲ್ಲಿ ಮೂವರ ನಡುವೆ ಮಾತುಕತೆ ನಡೆದಿದೆ. ರಾಜೀನಾಮೆ ನೀಡುವಂತೆ ನದೀಮ್ ಅಂಜುಮ್ ಸೂಚಿಸಿದ್ದಾರೆ. ಆದ್ರೆ ಇದಕ್ಕವರು ಒಪ್ಪದೇ ಇದ್ದಿದ್ರಿಂದ ನದೀಮ್, ಇಮ್ರಾನ್ ಖಾನ್‌ರ ಎಡಗೆನ್ನೆಗೆ ಬಾರಿಸಿದ್ದಾರಂತೆ. ಆದ್ರೆ ಹಾಗೇನೂ ನಡೆದಿಲ್ಲ ಅಂತ ಪಾಕ್ ಸೇನೆ ಹೇಳ್ತಾ ಇದೆ.