ತೆಲಂಗಾಣದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ಸೇರಿದಂತೆ ವಿವಿಧ ಪ್ರಾದೇಶಿಕ ನಾಯಕರನ್ನೊಳಗೊಂಡ ಬಿಜೆಪಿ ವಿರೋಧಿ ಬಣವನ್ನು ಕಟ್ಟಲು ಟಿಆರ್ಎಸ್ ವರಿಷ್ಠರು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಜೊತೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸಭೆ ನಡೆಸಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕಳೆದ ವರ್ಷ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕ್ರಮವಾಗಿ ಡಿಎಂಕೆ ಹಾಗೂ ಟಿಎಂಸಿ ಪರವಾಗಿ ಪ್ರಚಾರ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿರುವ ಕೀರ್ತಿಗೆ ಪಾತ್ರರಾಗಿರುವ ಪ್ರಶಾಂತ್ ಕಿಶೋರ್, ಕಳೆದ ಎರಡು ದಿನಗಳ ಹಿಂದೆ ಕೆಸಿ ರಾವ್ರನ್ನು ಭೇಟಿಯಾಗಿದ್ದಾರೆ ಎಂದು ಟಿಆರ್ಎಸ್ ಮೂಲಗಳು ತಿಳಿಸಿವೆ.
ಕಿಶೋರ್ ಟಿಆರ್ಎಸ್ ಜೊತೆ ಸಂಪರ್ಕದಲ್ಲಿದ್ದರೂ ಸಹ ಅವರ ಹಾಗೂ ಟಿಆರ್ಎಸ್ ನಡುವಿನ ಒಪ್ಪಂದಗಳ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಈ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಅಲ್ಲದೇ ಕೆಸಿ ರಾವ್ ಹಾಗೂ ಪ್ರಶಾಂತ್ ಕಿಶೋರ್ ಭೇಟಿ ಬಗ್ಗೆಯೂ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.