2 ವರ್ಷಗಳ ಹಿಂದೆ ದೇಶದಲ್ಲಿ ಕಾಲಿಟ್ಟ ಕೊರೊನಾ ಮಹಾಮಾರಿ ಜನ ಸಾಮಾನ್ಯರನ್ನು ಇನ್ನಿಲ್ಲದಂತೆ ಕಾಡಿದೆ. ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಲಾಕ್ ಡೌನ್ ಕಾರಣಕ್ಕೆ ತಿಂಗಳಾನುಗಟ್ಟಲೆ ಜನಜೀವನ ಸಂಪೂರ್ಣ ಸ್ತಬ್ಧವಾಗಿ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವಂತಾಗಿತ್ತು. ಇದರ ಪರಿಣಾಮ ಬಹುತೇಕ ಎಲ್ಲ ಕ್ಷೇತ್ರಗಳ ಮೇಲೂ ಬೀರಿತ್ತು.
ಇದರ ಬಿಸಿ ರಾಜಕೀಯ ಪಕ್ಷಗಳಿಗೂ ತಟ್ಟಿದೆ ಎಂಬ ಮಾಹಿತಿ ಈಗ ಬಹಿರಂಗವಾಗಿದ್ದು, ಕೊರೊನಾ ಕಾರಣಕ್ಕಾಗಿ ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬಂದಿದೆ. 2019-20 ನೇ ಸಾಲಿನಲ್ಲಿ 785 ಕೋಟಿ ರೂ. ದೇಣಿಗೆ ಸಂಗ್ರಹಿಸಿದ್ದ ಬಿಜೆಪಿ 2020-21 ರಲ್ಲಿ 477 ಕೋಟಿ ರೂಪಾಯಿ ಸಂಗ್ರಹಿಸಿದೆ.
ಇನ್ನು ಕಾಂಗ್ರೆಸ್ ದೇಣಿಗೆ ಸಂಗ್ರಹವು ಸಹ ಕುಸಿತಗೊಂಡಿದ್ದು, 2019-20 ರಲ್ಲಿ 139 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದ್ದರೆ 2020-21 ರಲ್ಲಿ 74.5 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದೆ. ಬಹುತೇಕ ಎಲ್ಲ ಪಕ್ಷಗಳ ದೇಣಿಗೆ ಸಂಗ್ರಹ ಕುಸಿತಗೊಂಡಿದ್ದು, ಒಟ್ಟಾರೆ ಶೇ.41.5 ರಷ್ಟು ದೇಣಿಗೆ ಸಂಗ್ರಹ ಇಳಿಮುಖವಾಗಿದೆ ಎನ್ನಲಾಗಿದೆ.