ಬೆಳಿಗ್ಗೆ ಏನು ತಿಂಡಿ ಮಾಡಲಿ ಎಂದು ತಲೆ ಕೆರೆದುಕೊಳ್ಳುವವರಿಗೆ ಇಲ್ಲಿದೆ ಒಂದು ಸುಲಭವಾದ ರೆಸಿಪಿ.
ಥಟ್ಟಂತ ರೆಡಿಯಾಗುವ ಈ ದೋಸೆ ಮಾಡುವುದಕ್ಕೂ ಸುಲಭ, ದೇಹಕ್ಕೂ ಹಿತಕರ. ಕಡಿಮೆ ಸಾಮಾಗ್ರಿಯಲ್ಲಿ ಮಾಡಿಬಿಡಬಹುದು. ರುಚಿಕರವಾದ ರಾಗಿ ದೋಸೆ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು: 2 ಕಪ್ ರಾಗಿ ಹಿಟ್ಟು, ½ ಕಪ್-ಅಕ್ಕಿ ಹಿಟ್ಟು, ½ ಕಪ್ –ರವೆ, ½ ಕಪ್-ಮೊಸರು, 2-ಹಸಿಮೆಣಸು, ½ ಕಪ್ –ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿದ್ದು, ½ ಕಪ್ –ಈರುಳ್ಳಿ ಸಣ್ಣಗೆ ಹೆಚ್ಚಿದ್ದು, ಉಪ್ಪು ರುಚಿಗೆ ತಕ್ಕಷ್ಟು,
ಮೊದಲಿಗೆ ರಾಗಿ ಹಿಟ್ಟಿಗೆ, ಅಕ್ಕಿ ಹಿಟ್ಟು, ರವೆ, ಈರುಳ್ಳಿ, ಕೊತ್ತಂಬರಿಸೊಪ್ಪು, ಮೊಸರು, ಹಸಿಮೆಣಸು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ನಂತರ ಇದಕ್ಕೆ ಎಷ್ಟು ಬೇಕೋ ಅಷ್ಟು ನೀರು ಸೇರಿಸಿ. ಹಿಟ್ಟು ನೀರುದೋಸೆ ಹಿಟ್ಟಿನ ಹದಕ್ಕೆ ಬರಲಿ. 1 ಗಂಟೆ ಹಾಗೇಯೇ ಇದನ್ನು ಇಟ್ಟುಬಿಡಿ. ನಂತರ ತವಾ ಬಿಸಿ ಮಾಡಿ ಅದಕ್ಕೆ ಎಣ್ಣೆ ಸವರಿ ತೆಳುವಾಗಿ ದೋಸೆ ಮಾಡಿ. ಬಿಸಿ ಬಿಸಿ ದೋಸೆಗೆ ತುಪ್ಪ, ಕಾಯಿ ಚಟ್ನಿ ಇದ್ದರೆ ರುಚಿಕರವಾಗಿರುತ್ತದೆ.