ಮೈಸೂರು: ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಸಂಭವಿಸಿದೆ.
ಕುಶಾಲನಗರಕ್ಕೆ ಹೋಗಿದ್ದ ಕುಟುಂಬ ಮೈಸೂರಿಗೆ ವಾಪಸ್ ಆಗುತ್ತಿದ್ದ ವೇಳೆ ದಟ್ಟಗಳ್ಳಿ ಬಳಿ ರಿಂಗ್ ರಸ್ತೆ ಮಧ್ಯೆಯೇ ಏಕಾಏಕಿ ಕಾರಿನ ಟೈರ್ ಸ್ಫೋಟಗೊಂಡಿದೆ. ದುರ್ಘಟನೆಯಲ್ಲಿ 12 ವರ್ಷದ ಬಾಲಕ ದೈವಿಕ್ ಹಾಗೂ 35 ವರ್ಷದ ಮಹಿಳೆ ಗುಣಲಕ್ಷ್ಮಿ ಸಾವನ್ನಪ್ಪಿದ್ದಾರೆ.
ಕಾರು ಚಾಲನೆ ಮಾಡುತ್ತಿದ್ದ ಜಗದೀಶ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುವೆಂಪುನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.