ಮಂಗಳೂರು: ವಿಧಿ ಯಾವ ಸಂದರ್ಭದಲ್ಲಿ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಮನ ಕಲಕುವ ಘಟನೆಯೊಂದು ನಡೆದಿದೆ.
ವ್ಯಕ್ತಿಯೊಬ್ಬರು ಕುಟುಂಬ ಸಮೇತರಾಗಿ ಮಂಗಳೂರಿನ ಪಾವಂಚೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ರಾಷ್ಟೀಯ ಹೆದ್ದಾರಿ 75ರ ಶಿರಾಡಿ ಅಡ್ಡ ಹೊಳೆ ಹತ್ತಿರದಲ್ಲಿ ವಾಹನದ ಇಂಜಿನ್ ನಲ್ಲಿ ಶಬ್ದ ಕೇಳಿ ಬಂದಿದೆ. ಹೀಗಾಗಿ ಅವರು ರಸ್ತೆ ಮಧ್ಯೆಯೇ ಕಾರು ನಿಲ್ಲಿಸಿ ಕಾರಿನ ಬಾನೆಟ್ ತೆರೆದು, ಪರೀಕ್ಷೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬೃಹತ್ ಮರದ ಕೊಂಬೆಯೊಂದು ಅವರ ಮೇಲೆ ಬಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸುರೇಶ್ ನಾವಡ(42) ಎಂಬುವವರೇ ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳು ಕೂಡ ಇದ್ದರು. ಆದರೆ ಮೃತ ವ್ಯಕ್ತಿ, ಇಂಜಿನ್ ಪರೀಕ್ಷೆ ಮಾಡಲು ಕಾರು ನಿಲ್ಲಿಸುತ್ತಿದ್ದಂತೆ, ಇವರು ಕಾರಿನಿಂದ ಕೆಳಗೆ ಇಳಿದು, ಮಾತನಾಡುತ್ತ ದೂರದಲ್ಲಿ ನಿಂತಿದ್ದರು. ಹೀಗಾಗಿಯೇ ಇವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದು, ಸುರೇಶ್ ಮಾತ್ರ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ನೆಲ್ಯಾಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.