ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿರೋ ರಷ್ಯಾಗೆ ಆ ಪುಟ್ಟ ರಾಷ್ಟ್ರ ಭಾರೀ ಶಾಕ್ ಕೊಟ್ಟಿದೆ. ಉಕ್ರೇನ್ ರಾಜಧಾನಿ ಕೀವ್ ಅನ್ನು ವಶಪಡಿಸಿಕೊಳ್ಳಲು ರಷ್ಯಾ ನಿರಂತರ ದಾಳಿಯನ್ನು ನಡೆಸ್ತಾ ಇತ್ತು. ಆದ್ರೆ ರಷ್ಯಾಗೆ ಸರಿಯಾಗಿ ತಿರುಗೇಟು ಕೊಟ್ಟಿರೋ ಉಕ್ರೇನ್, ಅಲ್ಲಿನ ಸೈನಿಕರನ್ನು ಕೂಡ ಸದೆಬಡಿದಿದೆ.
ಉಕ್ರೇನ್ ದೇಶದ ಮಾಹಿತಿ ಪ್ರಕಾರ, 4300 ರಷ್ಯನ್ ಸೈನಿಕರು ಯುದ್ಧದಲ್ಲಿ ಈಗಾಗ್ಲೇ ಪ್ರಾಣ ಕಳೆದುಕೊಂಡಿದ್ದಾರಂತೆ. ರಷ್ಯಾದ ಸುಮಾರು 146 ಯುದ್ಧ ಟ್ಯಾಂಕ್ ಗಳು, 27 ವಿಮಾನ ಹಾಗೂ 26 ಹೆಲಿಕಾಪ್ಟರ್ ಅನ್ನು ಕೂಡ ಧ್ವಂಸ ಮಾಡಿರುವುದಾಗಿ ಉಕ್ರೇನ್ ಉಪ ರಕ್ಷಣಾ ಸಚಿವ ಹನ್ನಾ ಮಲ್ಯಾರ್ ತಿಳಿಸಿದ್ದಾರೆ.
ಉಕ್ರೇನ್ ತಿರುಗಿ ಬಿದ್ದಿರೋದು ಅರಿವಾಗ್ತಿದ್ದಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುವಂತೆ ಆದೇಶಿಸಿದ್ದಾರೆ. ಇನ್ನೊಂದೆಡೆ ಅಮೆರಿಕ, ಬ್ರಿಟನ್, ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳು ಉಕ್ರೇನ್ ಗೆ ನೆರವು ಘೋಷಿಸಿವೆ.