ರಷ್ಯಾ – ಉಕ್ರೇನ್ ಯುದ್ದ ಈಗಾಗಲೇ 50 ನೇ ದಿನಕ್ಕೆ ಕಾಲಿಟ್ಟಿದ್ದು, ಮತ್ತಷ್ಟು ಕಠಿಣ ಕಾರ್ಯಾಚರಣೆಗಳನ್ನು ಕೈಗೊಳ್ಳುವುದಾಗಿ ರಷ್ಯಾ ಎಚ್ಚರಿಸಿದೆ. ಈ ಯುದ್ಧದ ಎಫೆಕ್ಟ್ ರಾಜ್ಯದ ಶಾಲಾ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳ ಮೇಲೂ ಆಗಿದ್ದು, ಇದರ ಪರಿಣಾಮ ನಿಗದಿತ ವೇಳೆಗೆ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ದೊರೆಯುವುದು ಅನುಮಾನವೆಂದು ಎಂದು ಹೇಳಲಾಗಿದೆ.
ಯುದ್ಧದ ಪರಿಣಾಮ ಜಾಗತಿಕವಾಗಿ ಮುದ್ರಣ ಕಾಗದದ ಅಭಾವ ಸೃಷ್ಟಿಯಾಗಿದ್ದು, ಚೀನಾದಲ್ಲಿ ಬಿಗಡಾಯಿಸುತ್ತಿರುವ ಕೊರೊನಾ ಕೂಡ ಇದಕ್ಕೆ ಮತ್ತೊಂದು ಕಾರಣವಾಗಿದೆ. ಭಾರತದಲ್ಲಿ ಮುದ್ರಣ ಕಾಗದ ತಯಾರಿಸುವ ಕಾರ್ಖಾನೆಗಳು ಹೆಚ್ಚಿನ ಬೆಲೆಗೆ ಹೊರದೇಶಗಳಿಗೆ ರಫ್ತು ಮಾಡುತ್ತಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಮುದ್ರಣ ಕಾಗದದ ಅಭಾವ ಉಂಟಾಗಿದೆ.
ಹೀಗಾಗಿ ರಾಜ್ಯದ ಪಠ್ಯಪುಸ್ತಕ ಮುದ್ರಕರು ಸಹ ಮುದ್ರಣ ಕಾಗದ ಕೊರತೆಯನ್ನು ಎದುರಿಸುತ್ತಿದ್ದು, ಹೀಗಾಗಿ ಮೇ 15ಕ್ಕೆ ಪಠ್ಯಪುಸ್ತಕಗಳನ್ನು ಮುದ್ರಿಸಿ ತಮಗೆ ಹಸ್ತಾಂತರಿಸಬೇಕು ಎಂಬ ಶಿಕ್ಷಣ ಇಲಾಖೆಯ ಗಡುವು ಸಾಧ್ಯವಾಗುವುದು ಕಷ್ಟ ಎನ್ನಲಾಗಿದೆ.
ಶಾಲೆಗಳಿಗೆ 5.46 ಕೋಟಿ ಪಠ್ಯಪುಸ್ತಕಗಳನ್ನು ಮುದ್ರಿಸಬೇಕಾಗಿದ್ದು, ಇದಕ್ಕಾಗಿ 15000 ಟನ್ ಕಾಗದ ಬೇಕಾಗಿದೆ ಎನ್ನಲಾಗಿದೆ. ನಿಗದಿತ ಅವಧಿಯೊಳಗೆ ಪಠ್ಯಪುಸ್ತಕ ಮುದ್ರಿಸಿ ಹಸ್ತಾಂತರಿಸಲು ಪ್ರತಿನಿತ್ಯ ಪ್ರತಿ ಮುದ್ರಕರಿಗೆ 350 ಟನ್ ಮುದ್ರಣ ಕಾಗದ ಬೇಕಾಗಿದ್ದು, ಆದರೆ ಈಗ ಪೂರೈಕೆಯಾಗುತ್ತಿರುವ ಪ್ರಮಾಣ ಕೇವಲ 50 ರಿಂದ 60 ಟನ್ ಎನ್ನಲಾಗಿದೆ. ಹೀಗಾಗಿ ನಿಗದಿತ ಅವಧಿಯೊಳಗೆ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಸಿಗುವುದು ಕಷ್ಟವಾಗಿದೆ.