ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಬಿಸಿ ಭಾರತದ ಗೃಹಿಣಿಯರಿಗೂ ತಟ್ಟುವ ಆತಂಕ ಎದುರಾಗಿದೆ. ಅಡುಗೆ ಎಣ್ಣೆ ಭಾರೀ ದುಬಾರಿಯಾಗುವ ಆತಂಕ ಶುರುವಾಗಿದೆ. ಭಾರತಕ್ಕೆ ಸಾಗಣೆಯಾಗಬೇಕಿದ್ದ 3,50,000 ಟನ್ಗಳಿಗಿಂತ ಹೆಚ್ಚು ಅಡುಗೆ ಎಣ್ಣೆಯ ಸಾಗಣೆ ಈಗ ಅಪಾಯಕ್ಕೆ ಸಿಲುಕಿದೆ.
ಲಾಜಿಸ್ಟಿಕ್ಸ್ ಮತ್ತು ಲೋಡಿಂಗ್ಗಳು ವಿವಿಧ ಬಂದರುಗಳಲ್ಲಿ ಸಿಲುಕಿಕೊಂಡಿವೆ. ಸೂರ್ಯಕಾಂತಿ ಎಣ್ಣೆಯ ವಿಶ್ವದ ಅತಿದೊಡ್ಡ ಖರೀದಿದಾರನಾಗಿರುವ ಭಾರತ, ತನ್ನ ಅಗತ್ಯದಲ್ಲಿ ಶೇ. 60ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಭಾರತ ತಾಳೆ ಮತ್ತು ಸೋಯಾಬೀನ್ ಎಣ್ಣೆಗಳನ್ನು ಸಹ ಅತ್ಯಧಿಕ ಪ್ರಮಾಣದಲ್ಲಿ ಖರೀದಿಸುತ್ತದೆ.
ಭಾರತದ ವ್ಯಾಪಾರಿಗಳು ಉಕ್ರೇನ್ ಮತ್ತು ರಷ್ಯಾದಿಂದ 5,50,000 ಟನ್ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದಾರೆ. ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಇದು ಆಮದಾಗಬೇಕು.
1,80,000 ಟನ್ ಅಡುಗೆ ಎಣ್ಣೆ ಬಂದರುಗಳಿಂದ ಭಾರತದತ್ತ ಹೊರಟಿದೆ. ಬಾಕಿ ಉಳಿದಿರುವ ಎಣ್ಣೆ ಆಮದಾಗುವುದು ಅನುಮಾನ ಅಂತಾನೇ ಹೇಳಲಾಗ್ತಿದೆ. ಇಡೀ ವಿಶ್ವಕ್ಕೆ ಬೇಕಾದ ಸೂರ್ಯಕಾಂತಿ ತೈಲ ಸಾಗಣೆಯಲ್ಲಿ ಶೇ.80ರಷ್ಟು ಪಾಲನ್ನು ಉಕ್ರೇನ್ ಮತ್ತು ರಷ್ಯಾ ಹೊಂದಿವೆ. ಹಾಗಾಗಿ ಯುದ್ಧದಿಂದಾಗಿ ಎಣ್ಣೆ ಪೂರೈಕೆಗೆ ಅಡ್ಡಿಯುಂಟಾಗಿದ್ದು, ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಅಡುಗೆ ಎಣ್ಣೆ ಆಮದಿಗಾಗಿ ಇನ್ನೊಂದು ವಾರ ಕಾಯಲಿರುವ ವ್ಯಾಪಾರಸ್ಥರು, ನಂತರ ಬೇರೆಡೆಯಿಂದ ತೈಲ ತರಿಸಿಕೊಳ್ಳುವ ಸಾಧ್ಯತೆಯಿದೆ.