ಉಕ್ರೇನ್ನ ರಾಜಧಾನಿ ಕೀವ್ನ ಮೇಲೆ ಮತ್ತೊಮ್ಮೆ ದಾಳಿಯನ್ನು ನಡೆಸಲು ರಷ್ಯಾದ ಪಡೆಗಳು ಮರುಸಂಘಟನೆಯಾಗುತ್ತಿರುವುದನ್ನು ಗಮನಿಸಿದ ಉಕ್ರೇನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ಇದೀಗ ಟರ್ನಿಂಗ್ ಪಾಯಿಂಟ್ನಲ್ಲಿದೆ ಎಂದು ಹೇಳಿದ್ದಾರೆ. ಶುಕ್ರವಾರವೂ ಇದೇ ವಿಚಾರವಾಗಿ ಮಾತನಾಡಿರುವ ಝೆಲೆನ್ಸ್ಕಿ ಮಕ್ಕಳನ್ನು ಯುದ್ಧಕ್ಕೆ ಕಳುಹಿಸದಂತೆ ರಷ್ಯಾದ ತಾಯಂದಿರಲ್ಲಿ ಮನವಿ ಮಾಡಿದ್ದಾರೆ.
ಫೆಬ್ರವರಿ 24ರಂದು ರಷ್ಯಾವು ಉಕ್ರೇನ್ನ ಮೇಲೆ ಆಕ್ರಮಣ ನಡೆಸಿದಾಗಿನಿಂದ ಸೋಶಿಯಲ್ ಮೀಡಿಯಾಗಳಲ್ಲಿ ಭಾಷಣಗಳನ್ನು ಹರಿಬಿಡುವ ಮೂಲಕ ತಮ್ಮ ಜನರನ್ನು ಒಟ್ಟುಗೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಉಕ್ರೇನ್ ಈಗಾಗಲೇ ಕಾರ್ಯತಂತ್ರದ ತಿರುವು ತಲುಪಿದೆ. ಉಕ್ರೇನಿಯನ್ ಭೂಮಿಯನ್ನು ಮುಕ್ತಗೊಳಿಸಲು ನಮಗೆ ಇನ್ನೂ ಎಷ್ಟು ದಿನಗಳಿವೆ ಎಂದು ಹೇಳುವುದು ಅಸಾಧ್ಯ. ಆದರೆ ನಾವು ಅದನ್ನು ಮಾಡುತ್ತೇವೆ ಎಂದು ಹೇಳಬಹುದು. ನಾವು ಈಗಾಗಲೇ ನಮ್ಮ ಗುರಿ, ನಮ್ಮ ಗೆಲುವಿನತ್ತ ಸಾಗುತ್ತಿದ್ದೇವೆ ಎಂದು ವೊಲೊಡಿಮಿರ್ ಹೇಳಿದರು.