ಹಾಲುಬಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅಕ್ಕಿ, ನವಣೆ, ರಾಗಿಯಿಂದ ಮಾಡಿರುತ್ತೇವೆ. ಇಲ್ಲಿ ಸುಲಭವಾಗಿ ರವೆಯಿಂದ ಮಾಡುವ ಹಾಲುಬಾಯಿ ಬಗ್ಗೆ ಮಾಹಿತಿ ಇದೆ. ರವೆ ಹಾಲುಬಾಯಿ ಮಾಡಿ ಮನೆಮಂದಿಯೆಲ್ಲಾ ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
1 ಕಪ್-ಚಿರೋಟಿ ರವೆ, ತೆಂಗಿನಕಾಯಿ ತುರಿ-1 ಕಪ್, ಬೆಲ್ಲ-1 ಕಪ್, ಏಲಕ್ಕಿ-2, ಲವಂಗ-3, ತುಪ್ಪ,4 ಟೇಬಲ್ ಸ್ಪೂನ್, ನೀರು-2 ½ ಕಪ್.
ಮಾಡುವ ವಿಧಾನ:
ಮೊದಲಿಗೆ ಒಂದು ದೊಡ್ಡ ಬೌಲ್ ಗೆ ರವೆ ಹಾಕಿ ಅದಕ್ಕೆ 2 ಕಪ್ ನೀರು ಸೇರಿಸಿ ½ ಗಂಟೆಗಳ ಕಾಲ ನೆನೆಯಲು ಇಡಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ತೆಂಗಿನಕಾಯಿ ತುರಿ, ಏಲಕ್ಕಿ, ಲವಂಗ ಹಾಕಿ ರುಬ್ಬಿಕೊಳ್ಳಿ. ನಂತರ ಈ ಮಿಶ್ರಣವನ್ನು ಒಂದು ಬಾಣಲೆಗೆ ಹಾಕಿ. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿ ಕರಗಲು ಬಿಡಿ. ಬೆಲ್ಲ ಕರಗಿದ ನಂತರ ಬೆಲ್ಲದ ಮಿಶ್ರಣವನ್ನು ರುಬ್ಬಿಟ್ಟುಕೊಂಡ ರವೆಯ ಮಿಶ್ರಣಕ್ಕೆ ಶೋಧಿಸಿಕೊಳ್ಳಿ.
ಈ ಮಿಶ್ರಣವನ್ನು ಗ್ಯಾಸ್ ಮೇಲೆ ಇಟ್ಟು ಬಿಡದೆ ಕೈಯಾಡಿಸುತ್ತಾ ಇರಿ. ಮಿಶ್ರಣ ದಪ್ಪಗಾದ ನಂತರ ತುಪ್ಪ ಹಾಕಿ ಮಿಕ್ಸ್ ಮಾಡಿಕೊಳ್ಳುತ್ತಾ ಇರಿ. ಇದು ತಳ ಬಿಟ್ಟ ನಂತರ ತುಪ್ಪ ಸವರಿದ ಪ್ಲೇಟ್ ಗೆ ಹಾಕಿ ಚೆನ್ನಾಗಿ ತಟ್ಟಿ . ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.