ಒಂದು ದಿನವೂ ರಜೆ ತೆಗೆದುಕೊಳ್ಳದೇ ಸತತ 27 ವರ್ಷ ಕೆಲಸ ಮಾಡಿದ್ದಕ್ಕೆ ಈ ಉದ್ಯೋಗಿಗೆ ಬರೋಬ್ಬರಿ 1.2 ಕೋಟಿ ರೂಪಾಯಿಗಳ ಭಕ್ಷೀಸು ಸಿಕ್ಕಿದೆ. ಅಂದ ಹಾಗೆ ಈ ವ್ಯಕ್ತಿಗೆ ಭಕ್ಷೀಸು ಕೊಟ್ಟಿರುವುದು ಆತ ಕೆಲಸ ಮಾಡುತ್ತಿರುವ ಕಂಪನಿಯಲ್ಲ. ಸಾರ್ವಜನಿಕರು !
ಹೌದು, ಕೆವಿನ್ ಫೋರ್ಡ್ ಎಂಬಾತ ಬರ್ಗರ್ ಕಿಂಗ್ ಕಂಪನಿಯಲ್ಲಿ ಸತತ 27 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅದೂ ಕೂಡ ಒಂದು ದಿನವೂ ರಜೆಯನ್ನು ತೆಗೆದುಕೊಳ್ಳದೇ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅವರ ಈ ಬದ್ಧತೆಯ ಕಾರ್ಯಕ್ಕೆ ಕಂಪನಿಯು ಅವರಿಗೆ ಸತ್ಕರಿಸಿದೆ.
ಆದರೆ, ಕೆವಿನ್ ಮಗಳು ಸೆರಿನಾ ತನ್ನ ತಂದೆಯ ಪರಿಶ್ರಮಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಬಯಸಿದ್ದಳು. ಅದರಂತೆ ಗೋಫಂಡ್ ಮಿ ಎಂಬ ಸಂಸ್ಥೆಯ ವೆಬ್ ಸೈಟ್ ನಲ್ಲಿ ಈ ವಿಚಾರವನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಳು.
Watch: ವಾಹನದಲ್ಲಿ ಹೋಗುತ್ತಿರುವಾಗಲೇ ಮಹಿಳೆ ತಲೆ ಮೇಲೆ ಬಿದ್ದ ತೆಂಗಿನಕಾಯಿ; ಹೆಲ್ಮೆಟ್ ಇದ್ದ ಕಾರಣ ಪ್ರಾಣಾಪಾಯದಿಂದ ಪಾರು
ಇದಕ್ಕೆ ಸ್ಪಂದಿಸಿದ ಸಾರ್ವಜನಿಕರು 1,50,000 ಡಾಲರ್ ಅಂದರೆ ಬರೋಬ್ಬರಿ 1,17,44,100 ರೂಪಾಯಿಗಳ ದೇಣಿಗೆ ನೀಡಿದ್ದಾರೆ. ಹಾಲಿವುಡ್ ನ ಖ್ಯಾತ ಹಾಸ್ಯನಟ ಡೇವಿಡ್ ಸ್ಪೇಡ್ ಅವರು 5,000 ಡಾಲರ್ (3,91,470 ರೂಪಾಯಿ) ದೇಣಿಗೆ ನೀಡಿದ್ದಾರೆ. ಸಾರ್ವಜನಿಕರು ನೀಡಿದ ಈ ದೇಣಿಗೆಯನ್ನು ಕಂಡ ಕೆವಿನ್ ಭಾವುಕರಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸೆರಿನಾ, ನನ್ನ ತಂದೆ ಕಳೆದ 27 ವರ್ಷಗಳಿಂದ ಒಂದು ದಿನವೂ ರಜೆಯನ್ನು ಹಾಕದೇ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕೆವಿನ್ ಕುರಿತಾದ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ಅವರ ಕರ್ತವ್ಯ ನಿಷ್ಠೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.