ಆಲ್ಕೋಹಾಲ್ ಸೇವನೆ ನಮ್ಮ ದೇಹಕ್ಕೆ ಯಾವ ರೀತಿ ಹಾನಿ ಉಂಟುಮಾಡುತ್ತದೆ ಅನ್ನೋದು ಎಲ್ಲರಿಗೂ ತಿಳಿದಿದೆ. ದೇಹದ ಮೇಲೆ ಮಾತ್ರವಲ್ಲ ಮೆದುಳಿನ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಆಲ್ಕೋಹಾಲ್ ಸೇವನೆಯಿಂದ ಅರಿವಿನ ದುರ್ಬಲತೆ, ಬುದ್ಧಿಮಾಂದ್ಯತೆ ಮತ್ತು ದುರ್ಬಲ ನಡವಳಿಕೆಯ ಸಮಸ್ಯೆ ಉಂಟಾಗಬಹುದು.
ನರಪ್ರೇಕ್ಷಕ ಚಟುವಟಿಕೆ (ನ್ಯೂರೋಟ್ರಾನ್ಸ್‌ಮೀಟರ್)
ನ್ಯೂರೋಟ್ರಾನ್ಸ್‌ಮೀಟರ್‌ಗಳು ಮೆದುಳಿನಲ್ಲಿನ ನರ ಸಂದೇಶಗಳ ವಿನಿಮಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆಲ್ಕೋಹಾಲ್ ಈ ನರಪ್ರೇಕ್ಷಕಗಳ ಕಾರ್ಯನಿರ್ವಣೆಯನ್ನು ಬದಲಾಯಿಸುತ್ತದೆ. ಇದು ‘GABA’ ಎಂಬ ಪ್ರತಿಬಂಧಕ ನರಪ್ರೇಕ್ಷಕಗಳ ಪರಿಣಾಮವನ್ನು ಹೆಚ್ಚಿಸುತ್ತದೆ. ಇದು ವಿಶ್ರಾಂತಿ ಮತ್ತು ಅರೆನಿದ್ರಾವಸ್ಥೆಗೆ ಕಾರಣವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಇದು ಪ್ರಚೋದಕ ನರಪ್ರೇಕ್ಷಕ ‘ಗ್ಲುಟಮೇಟ್’ ನ ಕ್ರಿಯೆಯನ್ನು ಪ್ರತಿಬಂಧಿಸುತ್ತದೆ. ಪರಿಣಾಮ ಕಡಿಮೆ ಚಿಂತನೆ ಮತ್ತು ಉತ್ಪಾದಕತೆಗೆ ಕಾರಣವಾಗಬಹುದು.
ಮೆದುಳಿನ ರಚನೆ
ಅತಿಯಾದ ಆಲ್ಕೊಹಾಲ್ ಸೇವನೆಯು ಮೆದುಳಿನ ರಚನೆಯಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ಇದು ಮೆದುಳಿನ ಅಂಗಾಂಶದ ಗಾತ್ರವನ್ನು ಕಡಿಮೆ ಮಾಡುತ್ತದೆ ಮತ್ತು ದ್ರವ ತುಂಬಿದ ಮೆದುಳಿನ ಕುಹರದ ಗಾತ್ರವನ್ನು ಹೆಚ್ಚಿಸುತ್ತದೆ. ಪರಿಣಾಮ ವ್ಯಕ್ತಿಯ ಆಲೋಚನಾ ಸಾಮರ್ಥ್ಯ ದುರ್ಬಲವಾಗುತ್ತದೆ. ನೆನಪಿನ ಶಕ್ತಿ, ಏಕಾಗ್ರತೆ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ತೊಂದರೆ ಉಂಟಾಗುತ್ತದೆ.
ನ್ಯೂರೋಕೆಮಿಕಲ್ ಅಸಮತೋಲನ
ದೀರ್ಘಕಾಲದ ಆಲ್ಕೊಹಾಲ್ ಸೇವನೆಯು ನರಪ್ರೇಕ್ಷಕಗಳ ಸೂಕ್ಷ್ಮ ಸಮತೋಲನಕ್ಕೆ ಅಡ್ಡಿಪಡಿಸುತ್ತದೆ. ಈ ಅಸಮತೋಲನವು ಖಿನ್ನತೆ ಮತ್ತು ಆತಂಕದಂತಹ ಮನಸ್ಥಿತಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅಲ್ಲದೆ ಇದು ಸ್ವಯಂ ನಿಯಂತ್ರಣವನ್ನು ಕಡಿಮೆ ಮಾಡುತ್ತದೆ.
ಮೆಸೊಲಿಂಬಿಕ್ ಮಾರ್ಗ
ಆಲ್ಕೋಹಾಲ್ ಡೋಪಮೈನ್ ಮಟ್ಟವನ್ನು ಹೆಚ್ಚಿಸುವ ಮೂಲಕ ಮೆದುಳಿನ ಮೆಸೊಲಿಂಬಿಕ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಇದು ಸಂತೋಷ ಮತ್ತು ಪ್ರಚೋದನೆಯ ಭಾವನೆಗಳನ್ನು ಉಂಟುಮಾಡುತ್ತದೆ. ಕಾಲಾನಂತರದಲ್ಲಿ ಇವು ಪುನರಾವರ್ತಿತ ಆಲ್ಕೊಹಾಲ್ ಸೇವನೆಯೊಂದಿಗೆ ಕಡಿಮೆ ಸಂವೇದನಾಶೀಲವಾಗುತ್ತವೆ.
ಮೆದುಳಿನ ಕಾರ್ಯನಿರ್ವಹಣೆ
ನಿರ್ಧಾರ ತೆಗೆದುಕೊಳ್ಳುವುದು ಮತ್ತು ಸಮಸ್ಯೆ ಪರಿಹಾರ ಕಂಡುಕೊಳ್ಳಬಲ್ಲ ಮೆದುಳಿನ ಪ್ರದೇಶಗಳ ಮೇಲೆ ಆಲ್ಕೊಹಾಲ್ ಪರಿಣಾಮ ಬೀರುತ್ತದೆ. ಇದು ಸಮಸ್ಯೆಗಳನ್ನು ತರ್ಕಿಸುವ ಮತ್ತು ಪರಿಹರಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಅಪಾಯ ತೆಗೆದುಕೊಳ್ಳುವ ನಡವಳಿಕೆಯನ್ನು ಹೆಚ್ಚಿಸುತ್ತದೆ.