ಜೂನ್ 21ರ ಮಂಗಳವಾರದಂದು ‘ವಿಶ್ವ ಯೋಗ ದಿನಾಚರಣೆ’ ನಡೆಯಲಿದ್ದು, ಇದಕ್ಕಾಗಿ ರಾಜ್ಯದಲ್ಲಿ ಭರ್ಜರಿ ಸಿದ್ದತೆ ನಡೆದಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನಲ್ಲಿ ನಡೆಯಲಿರುವ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇನ್ನು ಬಾಗಲಕೋಟೆ ಜಿಲ್ಲೆ ಪಟ್ಟದಕಲ್ಲಿನಲ್ಲಿ ಆಯೋಜಿಸಿರುವ ವಿಶ್ವ ಯೋಗ ದಿನಾಚರಣೆಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆಗಮಿಸುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತದಿಂದ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದ್ದು, ಇದರಲ್ಲಿ ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯನವರ ಹೆಸರನ್ನು ಹಾಕಿಸಲಾಗಿತ್ತು.
ಆದರೆ ತಮ್ಮ ಅನುಮತಿ ಪಡೆಯದೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಸಿದ್ದಕ್ಕೆ ಗರಂ ಆದ ಸಿದ್ದರಾಮಯ್ಯನವರು ಜಿಲ್ಲಾಧಿಕಾರಿಗೆ ಕರೆ ಮಾಡಿ ರೇಗಾಡಿದ್ದಾರೆ. ಬಳಿಕ ತಮ್ಮ ಆಪ್ತರ ಮುಂದೆ ಡಿಸಿ ಅಂದರೆ ಅವನೇನು ಆಕಾಶದಿಂದ ಇಳಿದು ಬಂದವನಾ ? ಈ ಅಧಿಕಾರಿಗಳೆಲ್ಲ ಕೊಬ್ಬಿ ಹೋಗಿದ್ದಾರೆಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.