ಜೈಪುರ : ಯೂಟ್ಯೂಬ್ ನಲ್ಲಿ ಸದಾ ಕಾಲ ಹಾಸ್ಯಮಯ ವಿಷಯಗಳನ್ನು ಪ್ರಸಾರ ಮಾಡುತ್ತ, ಸೆಲೆಬ್ರಿಟಿಯಾಗಬೇಕೆಂದು ಕನಸು ಕಂಡಿದ್ದ ಅಪ್ರಾಪ್ತ ಬಾಲಕಿಯನ್ನೇ ಟಾರ್ಗೆಟ್ ಮಾಡಿದ್ದ ಪಾಪಿಯೊಬ್ಬ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, 16 ವರ್ಷದ ಬಾಲಕಿಯೊಬ್ಬಳು ಯೂಟ್ಯೂಬ್ ನಲ್ಲಿ ಸ್ಟಾರ್ ಆಗಬೇಕೆಂಬ ಕನಸು ಕಂಡಿದ್ದಳು. ಇದನ್ನೇ ಬಂಡವಾಳವಾಗಿಸಿಕೊಂಡಿದ್ದ ಜೋಧ್ ಪುರದ ಬಾಬ್ರಾ ಹಾಲ್ ನ ನಿವಾಸಿ ನಿಜಾಮುದ್ದೀನ್ ಎಂಬ ವ್ಯಕ್ತಿ ಯೂಟ್ಯೂಬ್ ನಲ್ಲಿ ಸ್ಟಾರ್ ಮಾಡುವುದಾಗಿ ನಂಬಿಸಿದ್ದಾನೆ.
ಯೂಟ್ಯೂಬ್ ನಲ್ಲಿ ನೀನು ಸ್ಟಾರ್ ಆದರೆ, ಸಾಕಷ್ಟು ಹಣ ಸಂಪಾದನೆ ಮಾಡಬಹುದು ಎಂದು ನಂಬಿಸಿದ್ದಾನೆ. ಇದಕ್ಕಾಗಿ ಆಕೆಯನ್ನು ಜೋಧ್ ಪುರದಲ್ಲಿನ ಫ್ಲಾಟ್ ವೊಂದಕ್ಕೆ ಕರೆಯಿಸಿದ್ದಾನೆ. ಆಗ ಅಲ್ಲಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.
ಆ ನಂತರ ಯಾರಿಗೂ ಹೇಳದಂತೆ ಬಾಲಕಿಯ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾನೆ. ಹೀಗಾಗಿ ಕೆಲವು ದಿನ ಬಾಲಕಿ ಯಾರಿಗೂ ಹೇಳದೆ ಸುಮ್ಮನೆ ಇದ್ದು, ಆ ನಂತರ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಬಾಲಕಿಯ ಪೋಷಕರು, ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.