ಚಿಕಾಗೋ: ಮಕ್ಕಳು, ಯುವಕರು ಸ್ಮಾರ್ಟ್‌ಫೋನ್‌ಗಳಿಗೆ ವ್ಯಸನಿಗಳಾಗಿರೋದು ನಿಮಗೆ ಗೊತ್ತೇ ಇದೆ. ಆದರೆ, ಇಲ್ಲೊಂದೆಡೆ ಗೊರಿಲ್ಲಾ ಕೂಡ ಸ್ಮಾರ್ಟ್‌ಫೋನ್‌ನ ಚಟ ಅಂಟಿಸಿಕೊಂಡಿದೆ ಅಂದ್ರೆ ನಂಬ್ತೀರಾ..!
ಯುಎಸ್‍ನ ಚಿಕಾಗೋದ ಲಿಂಕನ್ ಪಾರ್ಕ್ ಮೃಗಾಲಯದಲ್ಲಿ ನೆಲೆಸಿರುವ ಗೊರಿಲ್ಲಾ ಅಮರೆ ಫೋನ್ ಪರದೆಯನ್ನು ವೀಕ್ಷಿಸುವುದನ್ನು ಬಹಳ ಇಷ್ಟಪಡುತ್ತದೆ. ಇದೊಂಥರಾ ವ್ಯಸನವಾಗಿ ಮಾರ್ಪಾಡಿಗಿದ್ದರಿಂದ, ಪರದೆಯ ಸಮಯವನ್ನು ಕಡಿತಗೊಳಿಸಬೇಕಾಗಿದೆ.
ಹಾಗಂತ ಈ ಗೊರಿಲ್ಲಾ ತನ್ನದೇ ಆದ ಸ್ಮಾರ್ಟ್‌ಫೋನ್ ಹೊಂದಿಲ್ಲ. ಆದರೆ, ಮೃಗಾಲಯಕ್ಕೆ ಭೇಟಿ ನೀಡುವ ಸಂದರ್ಶಕರು ಗ್ಲಾಸ್ ಡಿವೈಡರ್ ಮೂಲಕ ತಮ್ಮ ಫೋನ್‌ಗಳಲ್ಲಿ ಫೋಟೋ, ವಿಡಿಯೋಗಳನ್ನು ಮಾಡಿ, ಇದಕ್ಕೆ ತೋರಿಸುತ್ತಾರೆ. ಇದು ಗೊರಿಲ್ಲಾಗೆ ಗೀಳು ಹಿಡಿಸಿದೆ. ಹೀಗಾಗಿ ಯಾರೂ ಕೂಡ ಫೋಟೋ, ವಿಡಿಯೋ ತೋರಿಸದಂತೆ ಮೃಗಾಲಯ ಮನವಿ ಮಾಡಿದೆ.
ಕೇವಲ ಯುವಜನತೆ, ಮಕ್ಕಳು ಮಾತ್ರವಲ್ಲ ಗೊರಿಲ್ಲಾ ಕೂಡ ಸ್ಮಾರ್ಟ್ ಫೋನ್ ಗೀಳು ಹತ್ತಿಸಿಕೊಂಡಿರುವುದು ನಿಜಕ್ಕೂ ಆಶ್ಚರ್ಯ ತರಿಸುತ್ತದೆ.