ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆ ವಿವಾದಕ್ಕೆ ಕೊನೆಗೂ ಕಾಂಗ್ರೆಸ್ ತೆರೆ ಎಳೆದಿದ್ದು, ಅಧಿಕಾರ ಹಸ್ತಾಂತರ ಎಂಬುದು ಸುಳ್ಳು ಸುದ್ದಿ. ಅಂತಹ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದೆ.
ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಅವರನ್ನು ಕೆಳಗಿಳಿಸಿ ಮೊಹಮ್ಮದ್ ನಲಪಾಡ್ ಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಅಲ್ಲದೇ ಡಿಸೆಂಬರ್ ಅಂತ್ಯದವರೆಗೆ ರಕ್ಷಾ ರಾಮಯ್ಯ ಅಧಿಕಾರದಲ್ಲಿರಲು ಗಡುವು ನೀಡಲಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಬಣ ರಾಜಕೀಯ ತಾರಕಕ್ಕೇರಿದ ಬೆನ್ನಲ್ಲೇ ಇದೀಗ ಇಂಡಿಯನ್ ಯೂಥ್ ಕಾಂಗ್ರೆಸ್ ಅಧಿಕೃತವಾಗಿ ಮಾಹಿತಿ ನೀಡಿದ್ದು, ರಕ್ಷ ರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದೆ.
ಮುಂದಿನ ದಿನಗಳಲ್ಲಿ ನಲಪಾಡ್ ಗೆ ಅಧಿಕಾರ ಹಸ್ತಾಂತರ ಎಂಬುದು ಸುಳ್ಳು ಸುದ್ದಿ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಾಜ್ಯಕ್ಕೆ ಭೇಟಿ ನೀಡುವರೆಗೂ ಅಂತಹ ಯಾವುದೇ ಚರ್ಚೆಗಳಿಗೂ ಅವಕಾಶವಿಲ್ಲ ಎಂದು ಹೇಳಿದೆ. ಈ ಮೂಲಕ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಮೊಹಮ್ಮದ್ ನಲಪಾಡ್ ಗೆ ಶಾಕ್ ನೀಡಿದೆ.