ಬೆಂಗಳೂರು: ಯುವತಿಯರ ಸೋಗಿನಲ್ಲಿ ಫೇಸ್ ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಪುರುಷರನ್ನು ಸಂಪರ್ಕಿಸಿ ಬಳಿಕ ನಗ್ನ ವಿಡಿಯೋ ಕಾಲ್ ಮೂಲಕ ಬ್ಲಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ಬೃಹತ್ ಜಾಲಕ್ಕೆ ಸಹಕರಿಸುತ್ತಿದ್ದ ಮೂವರು ಅಂತರಾಜ್ಯ ಖದೀಮರನ್ನು ಬೆಂಗಳೂರು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹರಿಯಾಣ ಮೂಲದ ಮೊಹಮ್ಮದ್ ಮುಜಾಹಿದ್ (30), ಮೊಹಮ್ಮದ್ ಇಕ್ಬಾಲ್ (28), ಆಸಿಫ್ (27) ಎಂದು ಗುರುತಿಸಲಾಗಿದೆ. ಈ ಮೂವರ ಬಂಧನದ ಮೂಲಕ ದೇಶಾದ್ಯಂತ 3,951 ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ಪತ್ತೆಯಾಗಿದೆ.
ಬಂಧಿತರಿಂದ 6 ಮೊಬೈಲ್, ಸಾವಿರಾರು ನಕಲಿ ಸಿಮ್, ಕಂಪ್ಯೂಟರ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಮೊಹಮ್ಮದ್ ಮುಜಾಹಿದ್ ನಕಲಿ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳ ಏಜೆನ್ಸಿ ನಡೆಸುತ್ತಿದ್ದ. ವಿತರಕರಿಂದ ಸಿಮ್ ಕಾರ್ಡ್‌ಗಳನ್ನು ಆಕ್ಟಿವ್ ಮಾಡುವ ಸಲುವಾಗಿ ಡೆಮೋ ಸಿಮ್ ಮತ್ತು ಒಟಿಪಿಗಳನ್ನು ಪಡೆದು ಬಳಿಕ ಡಿಜಿಟಲ್ ವ್ಯಾಲೆಟ್‌ನೊಂದಿಗೆ ಸಂಪರ್ಕದಲ್ಲಿದ್ದ ಮೊಬೈಲ್ ಸಂಖ್ಯೆಗಳನ್ನು ಪತ್ತೆ ಮಾಡಿ ಇತರೆ ಇಬ್ಬರು ಆರೋಪಿಗಳ ಜತೆ ಸೇರಿಕೊಂಡು ವಂಚಕರ ಜಾಲಕ್ಕೆ ಸಹಕರಿಸುತ್ತಿದ್ದ.
ಕಳೆದ ಹತ್ತು ತಿಂಗಳಲ್ಲಿ 5 ಸಾವಿರಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಮತ್ತು ಡಿಜಿಟಲ್ ವ್ಯಾಲೆಟ್‌ಗಳನ್ನು ಸಕ್ರಿಯಗೊಳಿಸಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.