ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿರುವ ಘಟನೆಯೊಂದು ಬೆಚ್ಚಿ ಬೀಳಿಸುವಂತಿದೆ. ಮಸಾಜ್ ಮಾಡಿಸಿಕೊಳ್ಳುವ ಸಲುವಾಗಿ ಹುಡುಗಿಯರನ್ನು ಹುಡುಕುತ್ತಿದ್ದ ವ್ಯಕ್ತಿಯೊಬ್ಬನಿಗೆ ಎಸ್ಕಾರ್ಟ್ ವೆಬ್ ಸೈಟ್ ನಲ್ಲಿ ತನ್ನ ಪತ್ನಿ ಹಾಗೂ ಸಹೋದರಿಯ ಫೋಟೋ ಕಣ್ಣಿಗೆ ಬಿದ್ದಿದೆ. ಇದರಿಂದ ಕಂಗಾಲಾದ ಆತ ವಿಚಾರಿಸಿದ ವೇಳೆ ಐದು ವರ್ಷಗಳ ಹಿಂದೆ ಪತ್ನಿ ಹಾಗೂ ಸಹೋದರಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾದ ಫೋಟೋವನ್ನು ದುರುಪಯೋಗಪಡಿಸಿಕೊಂಡಿರುವುದು ಕಂಡು ಬಂದಿದೆ.
ಪ್ರಕರಣದ ವಿವರ: ಮುಂಬೈನ ಖಾರ್ ನಿವಾಸಿಯಾಗಿರುವ ಈ ವ್ಯಕ್ತಿ ಮಸಾಜ್ ಗಾಗಿ ಯುವತಿಯರನ್ನು ಹುಡುಕುತ್ತಿದ್ದಾಗ ತನ್ನ ಪತ್ನಿ ಹಾಗೂ ಸಹೋದರಿಯ ಫೋಟೋ ಕಣ್ಣಿಗೆ ಬಿದ್ದಿದೆ. ಈ ವಿಚಾರ ತಿಳಿದು ಅವರಿಬ್ಬರಿಗೂ ಸಹ ಗಾಬರಿಯಾಗಿದೆ. ಆಗ ಆ ವ್ಯಕ್ತಿ ಎಸ್ಕಾರ್ಟ್ ವೆಬ್ ಸೈಟ್ ನಲ್ಲಿದ್ದ ಮೊಬೈಲ್ ನಂಬರ್ ಮೂಲಕ ಯುವತಿಗೆ ಮೆಸೇಜ್ ಮಾಡಿದ್ದಲ್ಲದೆ ಮಾತನಾಡಿದ್ದು, ಭೇಟಿಯಾಗಲು ಸ್ಥಳ ನಿಗದಿಪಡಿಸಿದ್ದಾನೆ.
ಜೊತೆಗೆ ಈ ಎಲ್ಲ ವಿಚಾರವನ್ನು ಪೊಲೀಸರ ಗಮನಕ್ಕೆ ಬಂದಿದ್ದು, ಆ ಯುವತಿ ಹೇಳಿದ ಸ್ಥಳಕ್ಕೆ ಪತ್ನಿ ಮತ್ತು ಸಹೋದರಿಯನ್ನು ಸಹ ಕರೆದೊಯ್ದಿದ್ದಾನೆ. ಅಲ್ಲಿಗೆ ಬಂದ ರೇಷ್ಮಾ ಯಾದವ್ ಎಂಬ ಆ ಯುವತಿ ಫೋಟೋದಲ್ಲಿರುವುದು ತಾನೇ ಎಂಬಂತೆ ಬಿಂಬಿಸಲು ಮುಂದಾಗಿದ್ದಾಳೆ. ಈ ವೇಳೆ ವ್ಯಕ್ತಿಯ ಪತ್ನಿ ಹಾಗೂ ಸಹೋದರಿ ಆಕೆಯನ್ನು ಹಿಡಿದಿದ್ದು, ಪೊಲೀಸರ ವಶಕ್ಕೆ ನೀಡಿದ್ದಾರೆ.
ವಿಚಾರಣೆ ವೇಳೆ ಪುರುಷರನ್ನು ಆಕರ್ಷಿಸುವ ಸಲುವಾಗಿ ಸೋಶಿಯಲ್ ಮೀಡಿಯಾದಲ್ಲಿರುವ ಸುಂದರ ಯುವತಿಯರ ಫೋಟೋವನ್ನು ಎಸ್ಕಾರ್ಟ್ ವೆಬ್ ಸೈಟ್ ನಲ್ಲಿ ಹಾಕಿರುವುದು ತಿಳಿದು ಬಂದಿದೆ. ಇದು ದೊಡ್ಡ ಜಾಲ ಇರಬಹುದು ಎಂದು ಪೊಲೀಸರು ಶಂಕಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕುವ ಮುನ್ನ ಹಲವು ಬಾರಿ ಯೋಚಿಸಿ ಎಂದು ಎಚ್ಚರಿಸಿದ್ದಾರೆ. ಒಂದೊಮ್ಮೆ ಫೋಟೋ ಹಾಕುವುದಿದ್ದರೆ ಪ್ರೊಫೈಲ್ ಲಾಕ್ ಮಾಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.