ಹೊಸಪೇಟೆ: ಕೆಲಸದ ಆಸೆ ತೋರಿಸಿ ಬಡ ಯುವಕರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ತೃತೀಯಲಿಂಗಿಗಳನ್ನಾಗಿ ಬದಲಿಸುವ ಸಕ್ರಿಯ ಜಾಲ ವಿಜಯನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಹೂವಿನಹಡಗಲಿ ತಾಲೂಕಿನ ಗ್ರಾಮವೊಂದರ 19 ವರ್ಷದ ಯುವಕನನ್ನು ಅಪಹರಿಸಿ ತೃತೀಯ ಲಿಂಗಿಯಾಗಿ ಬದಲಿಸಲು ಆಪರೇಷನ್ ಮಾಡಲು ಮುಂದಾಗಿದ್ದು, ಈ ಜಾಲದಿಂದ ತಪ್ಪಿಸಿಕೊಂಡು ಬಂದ ಯುವಕ ಕುಟುಂಬವನ್ನು ಸೇರಿಕೊಂಡಿದ್ದಾನೆ.
ಅಮಾಯಕ ಯುವಕರನ್ನು ಕೆಲಸದ ಆಮಿಷದಿಂದ ಸೆಳೆದು ಇಲ್ಲವೇ ಅಪಹರಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗುವ ತೃತೀಯಲಿಂಗಿಗಳು ಲಿಂಗ ಪರಿವರ್ತನೆ ಮಾಡುತ್ತಾರೆ. ಭಿಕ್ಷಾಟನೆ ಸೇರಿದಂತೆ ವಿವಿಧ ಕೃತ್ಯಗಳಿಗೆ ದೂಡುತ್ತಾರೆ. ಒಪ್ಪದಿದ್ದರೆ ಚಿತ್ರಹಿಂಸೆ ನೀಡುತ್ತಾರೆ ಎಂದು ಹೇಳಲಾಗಿದೆ.
ಹೂವಿನಹಡಗಲಿ ತಾಲೂಕಿನ 19 ವರ್ಷದ ಯುವಕ ಟೈಲರಿಂಗ್ ಕಲಿಯಲು ಹೂವಿನಹಡಗಲಿಗೆ ಹೋಗುತ್ತಿದ್ದ. ಆತನನ್ನು ಗಮನಿಸಿದ ತೃತೀಯ ಲಿಂಗಿಗಳು ಪರಿಚಯಿಸಿಕೊಂಡು ಬೆಂಗಳೂರಿನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದಾರೆ. ಯುವಕ ಮೊದಲಿ ಒಪ್ಪಿಕೊಂಡು ನಂತರ ಅನುಮಾನದಿಂದ ಬರುವುದಿಲ್ಲವೆಂದು ಹೇಳಿದ್ದಾನೆ. ಆತನನ್ನು ಎರಡು ದಿನಗಳ ನಂತರ ಅಪಹರಿಸಿದ ತೃತೀಯ ಲಿಂಗಿಗಳು ಬೆಂಗಳೂರಿಗೆ ಕರೆದುಕೊಂಡು ಹೋಗಿ ಲಿಂಗ ಪರಿವರ್ತನೆ ಮಾಡುವ ಬಗ್ಗೆ ಮಾತನಾಡಿಕೊಂಡಿದ್ದಾರೆ. ಇದನ್ನು ಕೇಳಿಸಿಕೊಂಡ ಯುವಕ ರಾತ್ರೋರಾತ್ರಿ ತಪ್ಪಿಸಿಕೊಂಡು ಬಂದಿದ್ದಾನೆ.
ಬೆಂಗಳೂರು ಹೊರವಲಯಕ್ಕೆ ಬಂದ ಯುವಕ ಲಾರಿ ಚಾಲಕನ ನೆರವಿನಿಂದ ದಾವಣಗೆರೆಗೆ ಬಂದು ಅಲ್ಲಿನ ಬಾಡಿಗೆ ಕಾರ್ ಚಾಲಕರೊಬ್ಬರ ಮೊಬೈಲ್ ಪಡೆದುಕೊಂಡು ತನ್ನ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಯುವಕನ ಮನೆಯವರು ಕಾರ್ ಚಾಲಕನಿಗೆ ಊರಿಗೆ ಕರೆದುಕೊಂಡು ಬನ್ನಿ ಬಾಡಿಗೆ ಹಣ ಕೊಡುತ್ತೇವೆ ಎಂದು ತಿಳಿಸಿದ್ದಾರೆ. ಕೊನೆಗೆ ಕಾರ್ ಚಾಲಕ ಯುವಕನನ್ನು ಮನೆಗೆ ತಲುಪಿಸಿದ್ದಾರೆ ಎಂದು ಹೇಳಲಾಗಿದೆ.